ಚಿರತೆ ದಾಳಿಯಿಂದ ಗಾಯಗೊಂಡಿದ್ದ ಹಸು ಸಾವು

ಬೇಲೂರು ತಾಲೂಕಿನ ಕೋಗಿಲಮನೆ ಗ್ರಾಮದಲ್ಲಿ ಚಿರತೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಹಸು ಶುಕ್ರವಾರ ಸಾವನ್ನಪ್ಪಿದ ಸಂದರ್ಭ ಹಸುವಿನೊಂದಿಗಿರುವ ಮಾಲೀಕ ದೊರೆರಾಜು.
ಬೇಲೂರು ತಾಲೂಕಿನ ಕೋಗಿಲಮನೆ ಗ್ರಾಮದಲ್ಲಿ ಚಿರತೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಹಸು ಶುಕ್ರವಾರ ಸಾವನ್ನಪ್ಪಿದ ಸಂದರ್ಭ ಹಸುವಿನೊಂದಿಗಿರುವ ಮಾಲೀಕ ದೊರೆರಾಜು.
Published on

ಕಳೇಬರದ ಮುಂದೆ ಮಾಲೀಕ ದೊರೆರಾಜು ಅಳಲು

ಬೇಲೂರು: ತಾಲೂಕಿನ ಕೋಗಿಲಮನೆ ಗ್ರಾಮದಲ್ಲಿ ಗುರುವಾರ ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹಸು ಶುಕ್ರವಾರ ಬೆಳಗ್ಗೆ ಅಸುನೀಗಿದ್ದರಿಂದ, ಹಸು ಸಾಕಿದ್ದ ರೈತನ ಗೋಳು ಕೇಳುವಂತಿರಲಿಲ್ಲ.
ಈಗಾಗಲೇ ತಾಲೂಕಿನ ಬಿಕ್ಕೋಡು ಹೋಬಳಿಯ ಕೋಗಿಲಮನೆ ಸೇರಿದಂತೆ ಈ ಭಾಗದ ಸಾಕಷ್ಟು ಗ್ರಾಮಗಳಲ್ಲಿ ಕೆಲ ವರ್ಷಗಳಿಂದ ಕಾಡಾನೆಗಳ ಉಪಟಳದಿಂದ ಜನರು ಬೆಳೆ ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದರು. ಇದರೊಂದಿಗೆ ಈಗ ಚಿರತೆಯೊಂದು ಕೋಗಿಲಮನೆ ಗ್ರಾಮದ ದೊರೆರಾಜು ಎಂಬುವರು ಗುರುವಾರ ಮಧ್ಯಾಹ್ನ ತಮ್ಮ ಜಮೀನಿನ ಸಮೀಪ ಹಸುವನ್ನು ಮೇಯಲು ಬಿಟ್ಟದ್ದರು. ಆದರೆ ಈ ಸಂದರ್ಭ ಮೇಯುತ್ತಿದ್ದ ಹಸುವಿನ ಮೇಲೆ ದೊಡ್ಡದಾದ ಚಿರತೆ ಏಕಾಏಕಿ ದಾಳಿ ಮಾಡಿ ಹಸುವಿನ ಕೆಚ್ಚಲು, ಹೊಟ್ಟೆ ಭಾಗಕ್ಕೆ ಗಂಭೀರವಾಗಿ ಗಾಯಗೊಳಿಸಿದ್ದರಿಂದ ಹಸುವಿನ ಕರುಳು ಹೊಟ್ಟೆಯಿಂದ ಹೊರಕ್ಕೆ ಚಾಚಿತ್ತು. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶು ಇಲಾಖೆ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಹಸು ಶುಕ್ರವಾರ ಬೆಳಗ್ಗೆ ಸಾವನಪ್ಪಿದ್ದು, ಹಸು ಸಾಕಿದ್ದ ರೈತ ದೊರೆರಾಜು ಅವರ ಗೋಳು ಹೇಳತೀರದಾಗಿತ್ತು. ಆದರೆ ಹಸು ಸಾವನಪ್ಪಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಅತ್ತ ಸುಳಿಯದಿದ್ದರಿಂದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಸು ಮಾಲೀಕ ರೈತ ದೊರೆರಾಜು ಮಾತನಾಡಿ, ಈಗಾಗಲೇ ಕಾಡಾನೆಗಳ ಹಾವಳಿಯಿಂದ ನಾನು ಸೇರಿದಂತೆ ನಮ್ಮ ಭಾಗದ ಅಕ್ಕಪಕ್ಕದ ಗ್ರಾಮಗಳ ಸಾಕಷ್ಟು ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದೇವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಹಸುವನ್ನು ಸಾಕಿಕೊಂಡು ಪ್ರತಿನಿತ್ಯ ಡೇರಿಗೆ ಹಾಲನ್ನು ಹಾಕಿ ಜೀವನ ನಡೆಸುತ್ತಿದ್ದೆವು. ಆದರೆ ದೊಡ್ಡ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿದ್ದರಿಂದ ಮೃತಪಟ್ಟಿದೆ. ಹಸು ಸಾವನಪ್ಪಿದ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾರು ಸ್ಥಳಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net