ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಅಡ್ಡಿಪಡಿಸಿದರೆ ಸಹಿಸಲ್ಲ

ಸುದ್ದಿಗೋಷ್ಠಿಯಲ್ಲಿ ಗಂಜಿಗೆರೆ ಚಂದ್ರಶೇಖರ್, ಶಶಿಧರ್, ಧರ್ಮಶೇಖರ್, ಅಡಿವಿ ಸ್ವಾಮಿ, ಮುರಂಡಿ ಶಿವಯ್ಯ, ಮಂಜಣ್ಣ, ಜಯಣ್ಣ ಇದ್ದರು.
ಸುದ್ದಿಗೋಷ್ಠಿಯಲ್ಲಿ ಗಂಜಿಗೆರೆ ಚಂದ್ರಶೇಖರ್, ಶಶಿಧರ್, ಧರ್ಮಶೇಖರ್, ಅಡಿವಿ ಸ್ವಾಮಿ, ಮುರಂಡಿ ಶಿವಯ್ಯ, ಮಂಜಣ್ಣ, ಜಯಣ್ಣ ಇದ್ದರು.
Published on
ಅರಸೀಕೆರೆ ಗ್ರಾಮಂತರ: ಶಾಸಕರಾದಿಯಾಗಿ ನಾವೆಲ್ಲ ನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ಮಾತ್ರ ಸ್ಥಾಪಿಸುತ್ತಿಲ್ಲ, ಅವರ ತತ್ವಗಳನ್ನು ಪಾಲಿಸುತ್ತಾ ಬಂದಿದ್ದೇವೆ. ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಅಡ್ಡಿಪಡಿಸುವುದಾಗಲಿ ಅಥವಾ ಅಪಪ್ರಚಾರ ಮಾಡುವುದಾಗಲಿ ಮಾಡಿದರೆ ಬಸವ ಅನುಯಾಯಿಗಳಾದ ನಾವು ಸಹಿಸುವುದಿಲ್ಲ ಎಂದು ಬಸವೇಶ್ವರ ಪ್ರತಿಮೆ ಸ್ಥಾಪನೆ ಸಮಿತಿಯ ಪದಾಧಿಕಾರಿಗಳು ಎನ್.ಆರ್.ಸಂತೋಷ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಕೆಲಸವೆಂದರೆ ಜಾತ್ರೆಯ ತೇರು ಇದ್ದಂತೆ. ತೇರನ್ನು ಎಳೆಯಬೇಕು ಅಥವಾ ರಥದ ಕಲಶಕ್ಕೆ ಬಾಳೆಹಣ್ಣು ಹೊಡೆಯುವುದು ಸಂಪ್ರದಾಯ. ಆದರೆ ಎನ್.ಆರ್.ಸಂತೋಷ್ ಅವರು ಕಲ್ಲನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಸಮಾಜದ ಮುಖಂಡರನ್ನು, ಶಾಸಕರ ಹಿಂಬಾಲಕರು, ಗಂಜಿ ಗಿರಾಕಿಗಳು ಎಂದು ನಾಲಿಗೆ ಹರಿಯಬಿಟ್ಟಿರುವುದು ಅವರ ನೀಚ ರಾಜಕಾರಣವನ್ನು ತೋರಿಸುತ್ತದೆ ಎಂದು ಮಂಗಳವಾರ ಸಮಿತಿ ಪದಾಧಿಕಾರಿಗಳಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಗಂಜಿಗೆರೆ ಚಂದ್ರಶೇಖರ್, ಧರ್ಮ ಶೇಖರ್, ಮುರುಂಡಿ ಶಿವಯ್ಯ ಇತರರು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಬಸವೇಶ್ವರ ಪ್ರತಿಮೆ ಸ್ಥಾಪನೆ ಕುರಿತು ನೀಡಿದ ಹೇಳಿಕೆಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮನ್ನು ಗಂಜಿ ಗಿರಾಕಿ ಎಂದು ಹೇಳಿರುವವರು ಗಂಜಿ ಗಿರಾಕಿ ಯಾರು ಎಂದು ತಮ್ಮನ್ನು ತಾವೇ ಕೇಳಿಕೊಳ್ಳಲಿ. ಸಮಾಜದ ಬಂಧುಗಳು ಹಾಗೂ ಬಸವ ತತ್ವ ಅನುಯಾಯಿಗಳ ಬಹು ದಿನಗಳ ಕನಸಿಗೆ ಶಾಸಕರು ಸಹಕಾರ ರೂಪ ನೀಡುತ್ತಿದ್ದಾರೆ. ಅವರ ಈ ಜನಪರ ಕಾಳಜಿ ಮತ್ತು ಬಸವಣ್ಣನವರ ಬಗ್ಗೆ ಅವರಿಗೆ ಇರುವ ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ವಿಷಯದಲ್ಲಿ ರಾಜಕಾರಣ ಮಾಡಿದರೆ ತಮಗೇನಾದರೂ ಲಾಭವಾಗುತ್ತದೆ ಎಂಬ ಕನಸನ್ನೇನಾದರೂ ಕಂಡಿದ್ದರೆ ಕ್ಷೇತ್ರದ ಜನತೆ ದಡ್ಡರಲ್ಲ. ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಮಠಾಧೀಶರು, ಸಮಾಜದ ಮುಖಂಡರು ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲರೂ ಚರ್ಚಿಸಿಯೇ ಪಿಪಿ ವೃತ್ತದ ಬಳಿ ಅಶ್ವರೂಢ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಿದ್ದಾರೆ. ಮುಂದಿನ ಬಸವ ಜಯಂತಿಯೊಳಗೆ ಲೋಕಾರ್ಪಣೆ ಮಾಡಲು ಸಹ ಸಮಿತಿ ಕಾರ್ಯೋನ್ಮುಖವಾಗಿದೆ ಎಂದರು.
ಸಮಿತಿ ಪದಾಧಿಕಾರಿಗಳಾದ ಅಡವಿ ಸ್ವಾಮಿ, ಬಂಕ್ ಮಂಜಣ್ಣ, ಜಯಣ್ಣ, ರಘು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net