ಫಲಾನುಭವಿಗೆ ತಲುಪದ ಪರಿಹಾರ

ಪಟ್ಟಣದ ಕೃಷಿ ಇಲಾಖೆ ಮುಂದೆ ಪ್ರತಿಭಟನೆ ಮುಂದಾಗಿದ್ದ ಜಯಮ್ಮ ಮತ್ತು ಗ್ರಾಮಸ್ಥರು.
ಪಟ್ಟಣದ ಕೃಷಿ ಇಲಾಖೆ ಮುಂದೆ ಪ್ರತಿಭಟನೆ ಮುಂದಾಗಿದ್ದ ಜಯಮ್ಮ ಮತ್ತು ಗ್ರಾಮಸ್ಥರು.
Published on
ಹೊಳೆನರಸೀಪುರ: ರೈತ ಆತ್ಮಹತ್ಯೆ ಪ್ರಕರಣದ ನಿಜ ಫಲಾನುಭವಿಗೆ ತಲುಪಬೇಕಿದ್ದ ಪರಿಹಾರ 5 ಲಕ್ಷ ರೂ. ಪರಿಹಾರ ಮೊತ್ತ ಅಧಿಕಾರಿಗಳ ಎಡವಟ್ಟಿನಿಂದ ಸಹಜ ಸಾವಿಗೀಡಾದ ಮತ್ತೊಂದು ರೈತ ಕುಟುಂಬದ ಖಾತೆ ಸೇರಿದೆ.
ತಾಲೂಕಿನ ಹಳೆಕುಂಚೇವು ಗ್ರಾಮದ ರೈತ ಎಚ್.ಜೆ.ರಂಗಸ್ವಾಮಿ ಸಾಲಬಾಧೆಯಿಂದ 2025ರ ಮಾರ್ಚ್‌ನಲ್ಲಿ ತನ್ನ ಜಮೀನಿನಲ್ಲಿ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಪರಿಹಾರಕ್ಕಾಗಿ ಮೃತರ ಪತ್ನಿ ಜಯಮ್ಮ ಒಂದು ವರ್ಷದಿಂದ ಕೃಷಿ ಇಲಾಖೆ ಕಚೇರಿಗೆ ಅಲೆದಾಡಿ ಬೇಸತ್ತು, ಗ್ರಾಮದ ವಿದ್ಯಾವಂತ ಯುವಕರಿಗೆ ತಿಳಿಸಿದ್ದರು. ಅವರು ಬಂದು ವಿಚಾರಿಸುವಷ್ಟರಲ್ಲಿ ಕೃಷಿ ಇಲಾಖೆ ತನ್ನ ಲೋಪ ಸರಿಪಡಿಸುವ ಪ್ರಯತ್ನ ನಡೆಸಿದೆ.
ಪರಿಹಾರದ ಮೊತ್ತ ಬ್ಯಾಂಕ್ ಖಾತೆಗೆ ಬಂದು ಸೇರುತ್ತದೆ ಎಂದು ಹೇಳಿ ಜಯಮ್ಮ ಅವರಿಂದ ಹಣ ಸಂದಾಯ ರಸೀದಿಗೆ ಸಹಿ ತೆಗೆದುಕೊಂಡಿದೆ. ಇವರೇ ನೀಡಿದ ಮಾಹಿತಿಯಂತೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಬೇರೊಬ್ಬ ಮೃತ ರಂಗೇಗೌಡನ ಪತ್ನಿಯ ಹೆಸರೂ ಜಯಮ್ಮ ಎಂದಿದ್ದು, ಅವರ ಖಾತೆಗೆ ಆಧಾರ್ ಕಾರ್ಡ್ ಆಧರಿಸಿ ಸರ್ಕಾರ ಪರಿಹಾರ ಮೊತ್ತ ತುಂಬಿದೆ.
ಇಡೀ ಪ್ರಕರಣವನ್ನು ಪ್ರಶ್ನಿಸಿ ಗ್ರಾಮದ ಸಂತ್ರಸ್ತೆ ಬುಧವಾರ ಕೃಷಿ ಕಚೇರಿಗೆ ಆಗಮಿಸಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರೂ ಕೃಷಿ ಸಹಾಯಕ ನಿರ್ದೇಶಕಿ ಕೆ.ಎಚ್.ಸ್ವಪ್ನಾ, ನಮ್ಮದೇನೂ ತಪ್ಪಿಲ್ಲ. ಕಂದಾಯ ಇಲಾಖೆಯಿಂದ ಮಂಜೂರಾತಿ ಪತ್ರ ಸಹಿತ, ಐಡಿ ಕ್ರಿಯೇಟ್ ಮಾಡಿ ಕಳುಹಿಸಲಾಗಿತ್ತು ಎಂದು ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಕಡೆಗೆ ಬೊಟ್ಟು ಮಾಡಿದ್ದರು. ಪಟ್ಟು ಬಿಡದ ಸಂತ್ರಸ್ತ ಮಹಿಳೆ ಮತ್ತು ಆತನ ಪುತ್ರ, ಗ್ರಾಮಸ್ಥರೊಂದಿಗೆ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ನಾವು ಪರಿಶೀಲಿಸಿ ಮಂಜೂರುಗೊಳಿಸುವಂತೆ ಪತ್ರ ಹಾಕಿರುತ್ತೇವೆ. ಕೃಷಿ ಸಮುದಾಯದ ಹಿತಕಾಯುವುದು ಕೃಷಿ ಇಲಾಖೆಯ ಕರ್ತವ್ಯ. ದಾಖಲೆ ಪರಿಶೀಲಿಸಿ ಪರಿಹಾರ ನಿಧಿಯನ್ನು ಅರ್ಹ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರ ತಲುಪುವಂತೆ ಮಾಡಬೇಕಿತ್ತು. ಪ್ರಸ್ತುತ ಸಂದಾಯ ಹಣ ಹಿಂಪಡೆದು ಅರ್ಹರಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಸಂತ್ರಸ್ತರು ವಾಪಸ್ಸಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net