ಆದರ್ಶ ಶಾಲೆಯಲ್ಲಿ ನಿಯಮ ಮೀರಿ ಹಣ ಸಂಗ್ರಹ

ಹೊಳೆನರಸೀಪುರ ಪಟ್ಟಣದ  ಆದರ್ಶ  ವಿದ್ಯಾಲಯ.
ಹೊಳೆನರಸೀಪುರ ಪಟ್ಟಣದ ಆದರ್ಶ ವಿದ್ಯಾಲಯ.
Published on

ಪ್ರಮುಖ ಮುಖ್ಯಾಂಶಗಳು

  • Collection of money beyond the rules in Adarsh ​​School
ಹೊಳೆನರಸೀಪುರ: ತಾಲೂಕಿನ ತಟ್ಟೆಕೆರೆ ಆದರ್ಶ ವಿದ್ಯಾಲಯದಲ್ಲಿ ನಿಯಮ ಬಾಹಿರವಾಗಿ ಹಣ ಸಂಗ್ರಹ ಮಾಡಿದ ಆರೋಪದ ಮೇಲೆ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯಶಿಕ್ಷಕರ ವಿರುದ್ಧ ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ಸಂಗ್ರಹ ಮಾಡುತ್ತಿರುವ ವಿಷಯವಾಗಿ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯಶಿಕ್ಷಕರನ್ನು ಗುರುವಾರ ಪಾಲಕರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. 
2025 ಜುಲೈ 1 ರಂದು ಕೆಲವು ಪಾಲಕರ ತುರ್ತು ಸಭೆ ಕರೆದು ಹಣ ಸಂಗ್ರಹ ಮಾಡುವ ಬಗ್ಗೆ ವಿಷಯ ತಿಳಿಸಿದ್ದರು. ಅಂದಿನಿಂದ ಇಂದಿನವರೆಗೂ ಮಕ್ಕಳಿಂದ ಹಣ ಸಂಗ್ರಹ ಮಾಡುತ್ತಲೇ ಬಂದಿದ್ದರು. ಕೆಲ ದಿನಗಳ ಹಿಂದೆ ಹಣ ನೀಡದ ಮಕ್ಕಳನ್ನು ಶಾಲೆಯ ಪ್ರಾರ್ಥನೆ ವೇಳೆ ಬಹಿರಂಗವಾಗಿ ಹಣ ನೀಡುವಂತೆ ಮುಖ್ಯ ಶಿಕ್ಷಕರು ಒತ್ತಾಯಿಸಿದ್ದರು. 
ಸರ್ಕಾರಿ ಶಾಲೆಯಲ್ಲಿ ಯಾವುದೇ ಶುಲ್ಕವನ್ನು ಮಕ್ಕಳಿಂದ ವಸೂಲಿ ಮಾಡಬಾರದೆಂಬ ಆದೇಶವಿದ್ದರೂ ನಿಯಮ ಬಾಹಿರವಾಗಿ ವಿದ್ಯಾರ್ಥಿಗಳಿಂದ ಶಾಲಾ ಅಭಿವೃದ್ಧಿಗೆಂದು ತಲಾ ಒಂದು ಸಾವಿರ ರೂ.ವರೆಗೆ ವಸೂಲಿ ಮಾಡಿದ್ದು, ಯಾವ ಉದ್ದೇಶದಿಂದ ಹೆಚ್ಚಿನ ಹಣ ಸಂಗ್ರಹ ಮಾಡುತ್ತಿರುವ ವಿಚಾರ ತಿಳಿದ ಪಾಲಕರು ಗುರುವಾರ ಶಾಲೆಗೆ ಆಗಮಿಸಿ ಈ ಬಗ್ಗೆ ಪ್ರಶ್ನಿಸಿದ್ದಾರೆ.
ಶಾಲೆಯಲ್ಲಿ 512 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಒಬ್ಬ ವಿದ್ಯಾರ್ಥಿಗೆ ತಲಾ ಒಂದು ಸಾವಿರದಂತೆ 5,12,000 ರೂ. ಸಂಗ್ರಹವಾಗುತ್ತದೆ. ಪಾಲಕರು ಇದರ ಲೆಕ್ಕಾಚಾರ ಕೇಳಿದರೆ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯ ಶಿಕ್ಷಕ ಮಾಹಿತಿ ನೀಡದೆ ತಬ್ಬಿಬ್ಬಾದ ಘಟನೆ ನಡೆಯಿತು. ಮುಖ್ಯ ಶಿಕ್ಷಕ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್ ಇವರಿಬ್ಬರು ಜತೆಗೂಡಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರೀಶ್ ಅಧ್ಯಕ್ಷರಾದ ಬಳಿಕ ಶಾಲೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಶಾಲೆಯಲ್ಲಿ ಪಾಲಕರ ಅಭಿಪ್ರಾಯ ಸಂಗ್ರಹಿಸುವುದಿಲ್ಲ. ಮಾಹಿತಿ ಇಲ್ಲದೆ ಗಿರೀಶ್ ಆಯ್ಕೆ ಮಾಡಲಾಗಿದೆ. ಇದರ ಬಗ್ಗೆ ಯಾರೂ ಸಹ ಪ್ರಶ್ನೆ ಮಾಡುತ್ತಿಲ್ಲ. ಅಧ್ಯಕ್ಷನ ಬಗ್ಗೆ ಈಗಾಗಲೇ ಪಾಲಕರಿಂದ ಅನೇಕ ದೂರುಗಳು ಕೇಳಿ ಬಂದಿದ್ದು, ವಿದ್ಯಾರ್ಥಿಗಳನ್ನು ಹೆದರಿಸುವುದು, ವಿಡಿಯೋ ಮಾಡಿ ಗ್ರೂಪ್‌ಗೆ ಹಾಕುವುದು, ನೌಕರರ ಬಳಿ ಅಸಭ್ಯವಾಗಿ ಮಾತನಾಡುವುದು, ಶಾಲಾ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ಮಾತನಾಡಿಸುವುದು, ವಿವೇಕವಿಲ್ಲದೆ ವರ್ತಿಸುತ್ತಾರೆ ಎಂದು ಪಾಲಕರು ದೂರಿದ್ದಾರೆ.
ಶಾಲಾ ಸಮಯದಲ್ಲಿ ಸಭೆಗಳನ್ನು ನಡೆಸಬಾರದೆಂದು ಸರ್ಕಾರದ ಆದೇಶವಿದ್ದರೂ ಕೂಡ ಶಿಕ್ಷಕರು ಪಾಠ ಪ್ರವಚನ ಮಾಡುವ ಅವಧಿಯಲ್ಲಿ ಕೂಗಾಡುವುದು ಕಿರುಚಾಡುವುದು ಮತ್ತು ಶಿಕ್ಷಕರ ಅನುಮತಿ ಇಲ್ಲದೆ ತರಗತಿಗಳಿಗೆ ಏಕಾಏಕಿ ತೆರಳಿ ಮಕ್ಕಳ ಮತ್ತು ಶಿಕ್ಷಕರ ಬಳಿ ಅಸಭ್ಯವಾಗಿ ವರ್ತಿಸುತ್ತಾರೆ ಎಂಬ ದೂರುಗಳು ಹಲವು ತಿಂಗಳುಗಳಿಂದ ಕೇಳಿ ಬಂದಿರುತ್ತವೆ. ಇವನ ದುರ್ವರ್ತನೆಯಿಂದ ಶಾಲಾ ಶಿಕ್ಷಕರು ವರ್ಗಾವಣೆ ಪಡೆಯಲು ಸಿದ್ದರಾಗಿದ್ದಾರೆ. ಇಂಥವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಶಾಲಾ ವಾತಾವರಣವನ್ನು ತಿಳಿಗೊಳಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಶಾಲೆಯ ಅಭಿವೃದ್ಧಿಗೆ ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಮಾಡುವ ವಿಷಯದ ಬಗ್ಗೆ ಶಾಲೆಯ ಎಸ್‌ಡಿಎಂಸಿ ಸಭೆಯಲ್ಲಿ ತೀರ್ಮಾನಿಸಿ, ಎಲ್ಲರ ಒಪ್ಪಿಗೆಯ ಮೇರೆಗೆ ಮುಂದುವರೆಯಬೇಕು. ಹಣ ಸಂಗ್ರಹದ ಬಗ್ಗೆ ದಾಖಲಾತಿ ಇಡಬೇಕು. ಈ ನಿಯಮ ಪಾಲಿಸದೆ ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಮಾಡಿರುವ ದೂರು ಕೇಳಿ ಬಂದಿದ್ದು ಕಾರಣ ಕೇಳಿ ಶಾಲೆ ಮುಖ್ಯ ಶಿಕ್ಷಕ ಹಾಗೂ ದೈಹಿಕ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net