ಆಲೂರು: ತಾಲೂಕಿನ ಪಾಳ್ಯ ಹೋಬಳಿ ಕಾಮತಿ ಗ್ರಾಮದ ಸರ್ವೇ ನಂಬರ್ 73ರಲ್ಲಿ ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗ ಮತ್ತು ರಸ್ತೆಯನ್ನು ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದರು.
ಕಾಮತಿ ಗ್ರಾಮದ ಸರ್ವೆ ನಂಬರ್ 73ರ ವ್ಯಾಪ್ತಿಗೆ ಸೇರುವ ಜಮೀನನ್ನು ಸರ್ಕಾರವು ಇತ್ತೀಚೆಗಷ್ಟೇ ಕಂದಾಯ ಗ್ರಾಮವನ್ನಾಗಿ ಅಧಿಕೃತವಾಗಿ ಘೋಷಿಸಿತ್ತು. ಆದರೆ ಸರ್ಕಾರದ ಆದೇಶದ ಹೊರತಾಗಿಯೂ, ಈ ಜಮೀನಿನ ಮೇಲೆ ಕಣ್ಣಿಟ್ಟಿದ್ದ ಕೆಲವರು ಉದ್ದೇಶಪೂರ್ವಕವಾಗಿ ಅಕ್ರಮವಾಗಿ ಬೇಲಿ ನಿರ್ಮಿಸಿಕೊಂಡಿದ್ದರು. ಗ್ರಾಮಸ್ಥರು ದೂರಿನ ಮೇರೆಗೆ ಎಚ್ಚೆತ್ತ ತಹಸೀಲ್ದಾರ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸ್ಥಳ ಕಂದಾಯ ಇಲಾಖೆಗೆ ಸೇರಿದೆ ಎಂದು ಪೊಲೀಸ್ ಹಾಗೂ ಕಂದಾಯ ಸಿಬ್ಬಂದಿ ಸಹಕಾರದೊಂದಿಗೆ ಒತ್ತುವರಿ ತೆರವುಗಳಿಸಿದರು.
ಈ ಸಂದರ್ಭದಲ್ಲಿ ಸಬ್ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್, ಕಂದಾಯ ಸಿಬ್ಬಂದಿ ಅನಿಲ್ ನಾಯ್ಕ, ಗ್ರಾಮಸ್ಥರಾದ ಸಗಣಯ್ಯ, ಮಂಜುನಾಥ್, ರಾಜಯ್ಯ, ಯುವರಾಜ್, ಚಂದ್ರೇಗೌಡ, ಭಾಗ್ಯಮ್ಮ, ಅಮ್ಮಯ್ಯಮ್ಮ, ಮಲ್ಲಿಗೆಯಮ್ಮ ಇದ್ದರು.