ಚನ್ನರಾಯಪಟ್ಟಣದ ನಲ್ಲೂರು ಗ್ರಾಮದ ಬಳಿ ಇರುವ ಪುರಸಭೆಯ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯ ನಿರ್ವಹಣೆಯನ್ನು ಬೇರ್ಪಡಿಸಿ ಸಮರ್ಪಕವಾಗಿ ವಿಲೇವಾರಿ ಮಾಡುವ ಯಂತ್ರೋಪಕರಣಗಳು ಸೇರಿದ ವಿವಿಧ ಕಾಮಗಾರಿಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಆರ್.ಯತೀಶ್‌ಕುಮಾರ್, ಗಿರೀಶ್, ಕೋಟೆ ಮೋಹನ್, ಕವಿತಾ ರಾಜು, ಗಣೇಶ್, ಮೂರ್ತಿ ಇದ್ದರು.
ಚನ್ನರಾಯಪಟ್ಟಣ:ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ಯಾವುದೇ ಸ್ವಚ್ಛತಾ ಯೋಜನೆ ಅಥವಾ ಅಭಿಯಾನಗಳು ಸಂಪೂರ್ಣ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.
ತಾಲೂಕಿನ ನಲ್ಲೂರು ಬಳಿ ಇರುವ ಪುರಸಭೆಯ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸ್ವಚ್ಚ ಭಾರತ್ ಮಿಷನ್ 2.0 ಅಡಿ ಹಾಗೂ ಪುರಸಭಾ ಅನುದಾನದಲ್ಲಿ 1.24 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಪುರಸಭಾ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯ ನಿರ್ವಹಣೆಯನ್ನು ಬೇರ್ಪಡಿಸಿ ಸಮರ್ಪಕವಾಗಿ ವಿಲೇವಾರಿ ಮಾಡುವ ಯಂತ್ರೋಪಕರಣಗಳು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛ ಭಾರತ್ ಯೋಜನೆಯಡಿ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿ ಮೂಲಸೌಕರ್ಯಗಳನ್ನು ಒದಗಿಸಬಲ್ಲವೇ ಹೊರತು, ಪ್ರತಿಯೊಬ್ಬ ನಾಗರಿಕನು ಸ್ವಚ್ಛತೆಯನ್ನು ತಮ್ಮ ಸಾಮಾಜಿಕ ಜವಾಬ್ದಾರಿಯಾಗಿ ಸ್ವೀಕರಿಸಿದಾಗ ಮಾತ್ರ ಶಾಶ್ವತ ಬದಲಾವಣೆ ಕಾಣಬಹುದು. ಸ್ವಚ್ಛತಾ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ಆರೋಗ್ಯ ಹಾಗೂ ಸುಂದರವಾದ ಸಮಾಜ ನಿರ್ಮಾಣ ಸಾಧ್ಯ ಎಂದರು.
78.14 ಲಕ್ಷ ರೂ. ವೆಚ್ಚದಲ್ಲಿ ಎಂಆರ್‌ಎಫ್ ಶೆಡ್ ನಿರ್ಮಾಣಗೊಂಡಿದ್ದು 22 ಲಕ್ಷ ರೂ. ವೆಚ್ಚದಲ್ಲಿ ಯಂತ್ರೋಪರಕಣಗಳನ್ನು ಅಳವಡಿಸಲಾಗಿದೆ. 24 ಲಕ್ಷ ರೂ. ವೆಚ್ಚದಲ್ಲಿ ಬೀದಿನಾಯಿಗಳ ಆಶ್ರಯ ತಾಣವನ್ನು ನಿರ್ಮಾಣ ಮಾಡಲಾಗುತ್ತಿದ್ದು ಇದಕ್ಕೆ 15ನೇ ಹಣಕಾಸು ಯೋಜನೆಯಡಿ 3.42 ಲಕ್ಷ ರೂ. ಹಾಗೂ ಪುರಸಭೆ ಅನುದಾನದಲ್ಲಿ 21 ಲಕ್ಷ ರೂ. ನೀಡಲಾಗುತ್ತಿದೆ ಎಂದರು.
ಪ್ರತಿವರ್ಷ, ತ್ಯಾಜ್ಯ ನಿರ್ವಹಣಾ ಘಟಕದ ಉನ್ನತೀಕರಣಕ್ಕೆ ಆದ್ಯತೆ ನೀಡಲಾಗುತ್ತಿದ್ದು ಈ ಆವರಣದಲ್ಲಿ ಈಗಾಗಲೇ 200 ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಇದರಿಂದ ಪರಿಸರಕ್ಕೂ ನಮ್ಮ ಕೊಡುಗೆ ನೀಡಿದಂತಾಗುತ್ತದೆ. ಇಲ್ಲದಿದ್ದರೆ ಬರಗಾಲದ ಸನ್ನಿವೇಶಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಪಟ್ಟಣದಲ್ಲಿ ನಿತ್ಯ 15 ಟನ್ ಕಸ ಸಂಗ್ರಹಣೆಯಾಗುತ್ತಿದ್ದು ಈಗಾಗಲೇ 75 ಟನ್ ಗೊಬ್ಬರ ಮಾರಾಟ ಮಾಡಲಾಗಿದೆ ಎಂದರು.
ಸದ್ಯ ಚನ್ನರಾಯಪಟ್ಟಣ ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಕಾಡುತಿದ್ದು ಪರಿಸರ ಇಂಜಿನಿಯರ್, ಆರೋಗ್ಯಾಧಿಕಾರಿಗಳೂ ಇಲ್ಲ. ಬೇರೆ ಇಲಾಖೆಗಳಿಂದ ಸಿಬ್ಬಂದಿ ನಿಯೋಜನೆ ಮಾಡುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ, ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು. ಸಾರ್ವಜನಿಕರಿಗೆ ಇನ್ನಷ್ಟು ಸೇವೆ ನೀಡಲು 9 ಹೊಸ ಆಟೋಗಳ ಖರೀದಿಗೆ ಮುಂದಾಗಿರುವುದಾಗಿ ತಿಳಿಸಿದರು.
ಪ್ರಗತಿಪದ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು ಸಿಆರ್‌ಎಪ್ ಯೋಜನೆಯಡಿ 2 ಕೋಟಿ ರೂ. ರಸ್ತೆ, ನಿರ್ಮಾಣಕ್ಕೆ ಬಿಡುಗಡೆಯಾಗಿದೆ. ಈ ವ್ಯಾಪ್ತಿಯ ಸುತ್ತಲ ರಸ್ತೆ ನಿರ್ಮಾಣಕ್ಕಾಗಿ 1 ಕೋಟಿ ರೂ. ಬಿಡುಗಡೆಯಾಗಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶವಾಗುತ್ತದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್‌ಕುಮಾರ್, ಇಂಜಿನಿಯರ್ ಗಿರೀಶ್, ಮಾಜಿ ಅಧ್ಯಕ್ಷ ಕೋಟೆ ಮೋಹನ್, ಉಪಾಧ್ಯಕ್ಷೆ ಕವಿತಾ ರಾಜು, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗಣೇಶ್ ಆರೋಗ್ಯ ನಿರೀಕ್ಷಕ ಮೂರ್ತಿ ಸೇರಿದಂತೆ ಪುರಸಭಾ ಸಿಬ್ಬಂದಿ ಉಪಸ್ಥಿತರಿದ್ದರು.