ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಎಸ್‌ಡಿಎಂಸಿ ಅಧ್ಯಕ್ಷ ಪ್ರಸನ್ನ, ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಕೇಶವಮೂರ್ತಿ, ಮುಖ್ಯ ಶಿಕ್ಷಕಿ ಪಾರ್ವತಿ, ಶಿಕ್ಷಕರಾದ ಮಾರುತಿ, ಶಾಲಿನಿ, ಹೇಮಾವತಿ ಇತರರು ಇದ್ದರು.
ಬೇಲೂರು: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದ ನಂತರ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ, ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ತರವಾಗಿದೆ. ಇದರೊಂದಿಗೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಪಾಲಕರು ಗುರುತಿಸಬೇಕು. ಜತೆಗೆ ಪ್ರೋತ್ಸಾಹಿಸಿದರೆ ಮಕ್ಕಳ ಭವಿಷ್ಯ ಉತ್ತಮ ದಾರಿಯಲ್ಲಿ ಸಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲ ಘಟನೆಗಳ ಬಗ್ಗೆ ಮಕ್ಕಳು ಜಾಗರೂಕರಾಗಿರುವಂತೆ ತಿಳಿಸಬೇಕು. ಇದರೊಂದಿಗೆ ಶಾಲೆಗಳಲ್ಲಿ ಶಿಕ್ಷಕರು ಸಹ ಮಕ್ಕಳೊಂದಿಗೆ ಆತ್ಮೀಯವಾಗಿ ಪ್ರೀತಿಯಿಂದ ಪಾಠ ಹೇಳಿ ಕೊಡುವ ಕೆಲಸ ಮಾಡಬೇಕು. ಅಲ್ಲದೆ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪಾಲಕರು ಸಹಕಾರ ನೀಡಬೇಕು. ಜತೆಗೆ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಪಾಲಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಮಕ್ಕಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಆದ್ದರಿಂದ ತಮ್ಮ ಜನ್ಮ ದಿನವನ್ನು ಮಕ್ಕಳ ದಿನವಾಗಿ ಆಚರಿಸುವಂತೆ ತಿಳಿಸಿದ್ದರಿಂದ ಇಂದು ಮಕ್ಕಳ ದಿನ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದವರು ಇಂದು ಉನ್ನತ ಹುದ್ದೆಗಳಲಿದ್ದಾರೆ. ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಮನಸ್ಸು ಮಾಡಬೇಕು. ಯಾರೂ ಮೊಬೈಲ್ ಫೋನ್‌ಗೆ ದಾಸರಾಗದೆ ಸಮಯಕ್ಕೆ ಮಹತ್ವ ನೀಡಬೇಕು ಎಂದರು.ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಮಕ್ಕಳು ಶಿಕ್ಷಕರು ಹೇಳಿ ಕೊಡುವ ಪಾಠವನ್ನು ಅಚ್ಚುಕಟ್ಟಾಗಿ ಕೇಳಿ ನೀವು ಸಹ ನೆಹರು ಅವರಂತೆ ದೇಶಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು ಎಂದರು,
ಎಸ್‌ಡಿಎಂಸಿ ಅಧ್ಯಕ್ಷ ಪ್ರಸನ್ನ, ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಕೇಶವಮೂರ್ತಿ, ಮುಖ್ಯ ಶಿಕ್ಷಕಿ ಪಾರ್ವತಿ, ಶಿಕ್ಷಕರಾದ ಮಾರುತಿ, ಶಾಲಿನಿ, ಹೇಮಾವತಿ ಸೇರಿದಂತೆ ಪೋಷಕರಿದ್ದರು.