ಕುಟುಂಬಕ್ಕೆ ಬೆನ್ನೆಲುಬಾಗಿದ್ದ ಚೆನ್ನಮ್ಮ

ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಕುಟುಂಬಕ್ಕೆ ಬೆನ್ನೆಲುಬಾಗಿದ್ದ ಚೆನ್ನಮ್ಮ
  • ಎಚ್.ಡಿ.ರೇವಣ್ಣ ಬಣ್ಣನೆ
  • ಅಮ್ಮನ್ನನ್ನು ನೆನೆದು ಬಿಕ್ಕಿಬಿಕ್ಕಿ ಅತ್ತ ಪುತ್ರ

ಹಾಸನ:

ಸಾಮಾನ್ಯ ಪಟೇಲ್ ಕುಟುಂಬದಲ್ಲಿ ಹುಟ್ಟಿದರೂ ನಮ್ಮ ತಂದೆ ಎಚ್.ಡಿ.ದೇವೇಗೌಡರ ಏಳಿಗೆ, ನಮ್ಮ ಕುಟುಂಬದ ಬೆಳವಣಿಗೆಯಲ್ಲಿ ತಾಯಿ ಚೆನ್ನಮ್ಮ ಪಾತ್ರ ಪ್ರಮುಖವಾಗಿದೆ ಎಂದು ಅಮ್ಮನನ್ನು ನೆನೆದು ಎಚ್.ಡಿ.ರೇವಣ್ಣ ಬಿಕ್ಕಿ ಬಿಕ್ಕಿ ಅತ್ತರು.

ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡುತ್ತಿದ್ದರು, ಮನೆಗೆ ಯಾರೇ ಬರಲಿ ಊಟ ಹಾಕುತ್ತಿದ್ದರು. ಆ ದೇವತೆಯನ್ನು ಕಳೆದು ಕೊಂಡ ದುಃಖ ತಡೆಯಲಾಗುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟರು.

ಅನ್ನ ಹಾಕುವ ಜತೆಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ. ಕೆಲಸ ಕೊಡಿಸಿದ್ದಾರೆ. ನಿತ್ಯ ದೇವರ ಪೂಜೆ ಮಾಡುತ್ತಿದ್ದರು. ಎಲ್ಲ ಮಂತ್ರಗಳನ್ನು ಹೇಳುತ್ತಿದ್ದರು ಎಂದ ಅವರು, ಅಂತ್ಯಕ್ರಿಯೆಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಬಹುತೇಕ ಮಠಗಳ ಸ್ವಾಮೀಜಿಗಳು, ಪಕ್ಷಾತೀತವಾಗಿ ರಾಜ್ಯದ ಮುಖ್ಯಮಂತ್ರಿ ಸೇರಿ ಕೇಂದ್ರ ಮತ್ತು ರಾಜ್ಯ ಸಚಿವರು, ಎಲ್ಲ ರಾಜಕಾರಣಿಗಳು ಆಗಮಿಸಿದ್ದರು. ಜಿಲ್ಲಾಡಳಿತದ ಅಧಿಕಾರಿಗಳು, ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ಸ್ವತಃ ಐಜಿ ಅವರೇ ಆಗಮಿಸಿದ್ದರು. ಎಲ್ಲರ ಉಪಕಾರ ಎಂದೂ ಮರೆಯುವುದಿಲ್ಲ ಎಂದ ಅವರು ಜು.30ರಂದು ಆರಾಧನಾ ಮಹೋತ್ಸವವಿದ್ದು, ಪ್ರತಿಯೊಬ್ಬರೂ ಪಕ್ಷಾತೀತವಾಗಿ ಆಗಮಿಸಬೇಕು ಎಂದು ವಿನಂತಿಸಿದರು.

ನಮ್ಮ ತಂದೆ 1962ರಲ್ಲಿ ಹೊಳೆನರಸೀಪುರದಲ್ಲಿ 10 ರೂ. ಬಾಡಿಗೆ ಮನೆಯಲ್ಲಿದ್ದರು. ಪಡುವಲಹಿಪ್ಪೆಯಲ್ಲಿ ಒಡವೆ ಅಡಮಾನ ಇಟ್ಟು 1500 ರೂ.ಗೆ 12 ಎಕರೆ ಜಮೀನು ಖರೀದಿ ಮಾಡಿ,ಮನೆ ನಿರ್ಮಿಸಿದ್ದರು. ಆ ಕಾರಣಕ್ಕೆ ಮೂರು ಕಡೆಗೂ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ಅಪ್ಪಟ ದೈವಭಕ್ತರಾಗಿದ್ದ ತಾಯಿ ಕುಲದೇವರು ರಂಗನಾಥಸ್ವಾಮಿ ಪಾದದಡಿ ಇರಬೇಕೆಂದು ಅಲ್ಲಿ ಅಂತ್ಯಕ್ರಿಯೆ ಮಾಡಿದ್ದೇವೆ. ತಂದೆ ಪಡುವಲಹಿಪ್ಪೆಯಲ್ಲಿ ಮಾಡೋಣ ಎಂದರು. ಆದರೆ, ಕುಮಾರಸ್ವಾಮಿ ಇಲ್ಲೇ ಮಾಡೋಣ ಎಂದು ಹಠ ಹಿಡಿದರು. ಅದಕ್ಕಾಗಿ ಅವರು ಮೊದಲೇ ಅಲ್ಲಿ ಜಾಗ ಖರೀದಿ ಮಾಡಿದ್ದರು. ಹಾಗಾಗಿ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ಸನ್ನಿಧಾನದ ತಟದಲ್ಲಿ ಅಂತ್ಯಕ್ರಿಯೆ ಮಾಡಿದೆವು ಎಂದು ವಿವರಿಸಿದರು.

2001ರಲ್ಲಿ ಆ್ಯಸಿಡ್ ದಾಳಿ ನಡೆಯದಿದ್ದರೆ ಇನ್ನೂ 10 ವರ್ಷ ಬದುಕಿರುತ್ತಿದ್ದರು. ಆಗ ರೇವಣ್ಣನನ್ನು ಮುಗಿಸಲೇಬೇಕು ಎಂದು ದುರುಳರು ಸಂಚು ರೂಪಿಸಿದ್ದರು. ಅಂದು ಶಿವರಾತ್ರಿಯಂದು ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ, ಇಲ್ಲದಿದ್ದರೆ ನನ್ನ ಮೇಲೆ ದಾಳಿ ನಡೆಯುತ್ತಿತ್ತು. ನನ್ನ ಬದಲಿಗೆ ತಾಯಿ ನೋವು ತಿಂದರು ಎಂದರು.

ಕುಂಕುಮ ಹಚ್ಚಿ, ಹೂವು ಮುಡಿಸಿದ ಗೌಡರು
ಜು.18ರ ಶನಿವಾರ ಮಧ್ಯಾಹ್ನ 3.45ರ ಸುಮಾರಿಗೆ ತಂದೆ ಅವರು ದೇವರ ಪ್ರಸಾದ ಕೊಟ್ಟು, ಹಣೆಗೆ ಕುಂಕುಮ ಹಚ್ಚಿ, ಹೂವು ಮುಡಿಸಿದ ಕೆಲಹೊತ್ತಲ್ಲೇ ತಾಯಿ ಕೊನೆಯುಸಿರೆಳೆದರು. ಇಂತಹ ಸಾವು ಯಾರಿಗೂ ಸಿಗುವುದಿಲ್ಲ. ಅದಕ್ಕೂ ಮುನ್ನ ನಾವು ಧರ್ಮಸ್ಥಳಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸಿಕೊಂಡು ಬಂದಿದ್ದರೂ, ಪ್ರಸಾದ ಕೊಡಲಾಗಲಿಲ್ಲ ಎಂದು ರೇವಣ್ಣ ಮರುಗಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net