ನ ಸಮಿತಿಯ ತಾಲೂಕು ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ ನೇತೃತ್ವದ ತಂಡ ಇತ್ತೀಚೆಗೆ ಭೇಟಿ
ಚನ್ನರಾಯಪಟ್ಟಣ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ ನೇತೃತ್ವದ ತಂಡ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿತ್ತಲ್ಲದೆ, ಪ್ರಯಾಣಿಕರ ಕುಂದುಕೊರತೆ ಆಲಿಸುವುದರ ಜತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿತು.
ಸಮಿತಿ ಕಾರ್ಯದರ್ಶಿ ಜಿ.ಆರ್.ಹರೀಶ್ ಸೇರಿದಂತೆ ಇತರ ಸದಸ್ಯರು ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಶಕ್ತಿ ಯೋಜನೆ ಕುರಿತಾದ ಸಾಧಕ-ಬಾಧಕಗಳನ್ನು ಚರ್ಚಿಸಿದರು. ನಂತರ ಶೌಚಗೃಹವನ್ನು ವೀಕ್ಷಿಸಿ ಶುಚಿತ್ವವಿಲ್ಲದಿರುವ ಬಗೆ ಅಸಮಾಧಾನ ವ್ಯಕ್ತಪಡಿಸಿದರು. ಮೂತ್ರ ವಿಸರ್ಜನೆಗೆ 2 ರೂ. ಬದಲಾಗಿ 5 ರೂ. ಪಡೆಯುತ್ತಿರುವ ಬಗೆ ದೂರು ಬಂದ ಹಿನ್ನೆಲೆಯಲ್ಲಿ ಟೆಂಡರ್‌ದಾರರನ್ನು ಪ್ರಶ್ನಿಸಿದರು. ನಂತರ ಹೋಟೆಲ್‌ಗೆ ತೆರಳಿ ಅಲ್ಲಿನ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು. ಇಡ್ಲಿಗೆ ಬಳಸುವ ಬಟ್ಟೆ, ಅಡುಗೆಗೆ ಬಳಸುವ ಪಾತ್ರೆ, ಪರಿಕರಗಳನ್ನು ಪರಿಶೀಲಿಸಿದರು. ಶುಚಿತ್ವದೊಂದಿಗೆ ಕೆಲ ಪಾತ್ರೆಗಳನ್ನು ಬದಲಾಯಿಸುವಂತೆ ಸೂಚಿಸಿದರು.
ನಿಲ್ದಾಣದಲ್ಲಿನ ಶುದ್ಧ ನೀರಿನ ಘಟಕಗಳನ್ನು ಪರಿಶೀಲಿಸಿ, ಶಿಶುಪಾಲನ ಕೇಂದ್ರ, ಪೊಲೀಸ್ ಚೌಕಿಯ ಶುಚಿತ್ವದ ಬಗೆಗ ಮಾಹಿತಿ ಪಡೆದರು.
ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ನಿಲ್ದಾಣಕ್ಕೆ ಭೇಟಿ ನೀಡಲಾಗಿದೆ. ಪ್ರಯಾಣಿಕರು ಹೆಚ್ಚಿನ ಬಸ್‌ಗೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ನಿಲ್ದಾಣದಲ್ಲಿರುವ ಪೊಲೀಸ್ ಚೌಕಿ ನೆಪಮಾತ್ರಕ್ಕೆ ಇದ್ದು, ಪೊಲೀಸ್‌ನವರು ಇರುವುದಿಲ್ಲ ಎಂಬ ದೂರು ಬಂದಿದೆ. ಬೆಂಗಳೂರು, ಮಂಗಳೂರು ಮತ್ತು ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ನಿಲ್ದಾಣ ಇದಾಗಿದ್ದು, ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಗಲು-ರಾತ್ರಿ ಪೊಲೀಸ್ ಗಸ್ತು ಇರುವುದರ ಜತೆಗೆ ಸಿಸಿ ಕ್ಯಾಮರಾ ಅಳವಡಿಸುವಂತೆ ಘಟಕ ವ್ಯವಸ್ಥಾಪಕರಿಗೆ ಸಮಿತಿ ಅಧ್ಯಕ್ಷ ಪ್ರಕಾಶ್‌ಗೌಡ ಸೂಚಿಸಿದರು.
ವಿಶ್ರಾಂತಿ ಗೃಹ, ಶಿಶುಪಾಲನಾ ಕೇಂದ್ರದ ದುರಸ್ತಿಗೆ ಸೂಚಿಸಲಾಗಿದೆ. ಇಬ್ಬರು ಸ್ವಚ್ಛತಾ ಸಿಬ್ಬಂದಿಯಿದ್ದು, ಐವರನ್ನು ನೇಮಕ ಮಡುವಂತೆ ಟೆಂಡರ್‌ದಾರರಿಗೆ ಸೂಚಿಸಲಾಗಿದೆ. ಅಂತೆಯೇ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಪಡಿಸುವುದರ ಜತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ರೂಟ್‌ನ ನಾಮಫಲಕ ಅಳವಡಿಸಿ ಎಂದು ಹೇಳಿದರು.
ಸಮಿತಿ ಸದಸ್ಯರಾದ ರಂಗಸ್ವಾಮಿ, ನವೀನ್, ಅರಳಾಪುರ ನಾಗೇಶ್, ಜನಾರ್ದನ್, ರಂಗಸ್ವಾಮಿ, ಚೋಳೆನಹಳ್ಳಿ ಗಣೇಶ್, ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕ ನೂತನ್, ನಿಲ್ದಾಣಾಧಿಕಾರಿ ಕೃಪಾಕರ್, ಜಗದೀಶ್ ಇದ್ದರು.