ಅರಕಲಗೂಡು: ಟಾಟಾ ಪವರ್ ಕಂಪನಿಗೆ ವಿದ್ಯುತ್ ಸರಬರಾಜು ಪರವಾನಗಿ ನೀಡುವುದನ್ನು ವಿರೋಧಿಸಿ ಸೆಸ್ಕ್ ಸಿಬ್ಬಂದಿ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸೆಸ್ಕ್ ಕಚೇರಿ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಿದಂಬರಂ ಮಾತನಾಡಿ, ಟಾಟಾ ಪವರ್ ಕಂಪನಿ ವಿದ್ಯುತ್ ವಿತರಣಾ ಚಟುವಟಿಕೆಗಳನ್ನು ಪ್ರಾರಂಭಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿರುವುದು ಆಕ್ಷೇಪಾರ್ಹವಾಗಿದೆ. ಇದು ನಿಗಮದ ನೌಕರರು ಮತ್ತು ಗ್ರಾಹಕರಿಗೆ ಆತಂಕದ ಸಂಗತಿಯೂ ಆಗಿದೆ. ಖಾಸಗಿ ಕಂಪನಿಗಳ ಪ್ರವೇಶದಿಂದ ನೌಕರರ ಸೇವಾ ಭದ್ರತೆಗೆ ಧಕ್ಕೆಯಾಗಲಿದೆ. ಹಲವು ವರ್ಷಗಳಿಂದ ಜನರ ತೆರಿಗೆ ಹಣ ಹಾಗೂ ನೌಕರರ ಶ್ರಮದಿಂದ ಕಟ್ಟಿದ ನಿಗಮದ ಆಸ್ತಿಯನ್ನು ಖಾಸಗಿಯವರು ಲಾಭ ಮಾಡಿಕೊಳ್ಳಲು ವಹಿಸುವುದು ಸರಿಯಲ್ಲ. ಇವರು ಕೈಗಾರಿಕೆಗಳು, ವಾಣಿಜ್ಯ ಬಳಕೆ ಇನ್ನಿತರ ಆದಾಯ ಮೂಲದ ಕಡೆ ಗಮನಹರಿಸುವುದರಿಂದ ಸಾಮಾನ್ಯರು ಹಾಗೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುವುದು ಮರೀಚಿಕೆಯಾಗಲಿದೆ. ಹೀಗಾಗಿ ಖಾಸಗಿ ಕಂಪನಿಗೆ ವಹಿಸುವ ತೀರ್ಮಾನ ಕೈ ಬಿಟ್ಟು ನಮ್ಮೆಲ್ಲರ ಹಿತ ಕಾಯಬೇಕು ಎಂದು ಆಗ್ರಹಿಸಿದರು.
ಸೆಸ್ಕ ಸಹಾಯಕ ಇಂಜಿನಿಯರ್ ಖುಷ್ವಂತ್, ಗಿರೀಶ್, ವಿನುತ, ರಘುನಾಥ್, ನೌಕರರ ಸಂಘದ ಕುಮಾರ್, ಮಂಜುನಾಥ್, ಪ್ರದೀಪ್, ನಾಗೇಶ್, ಮಧು, ಧರಣೀಶ್, ತ್ರಿಮೂರ್ತಿ, ಸಂಘದ ಪದಾಧಿಕಾರಿಗಳು, ನೌಕರ ವರ್ಗದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.