ಅರಕಲಗೂಡು: ಪಟ್ಟಣದ ಸಾಲಗೇರಿ ಬಡಾವಣೆಯಲ್ಲಿ ಭಾನುವಾರ ತಡರಾತ್ರಿ ವಾಸದ ಮನೆಗೆ ಕ್ಯಾಂಟರ್ ನುಗ್ಗಿ ನಜ್ಜುಗುಜ್ಜಾದ ವಾಹನದಲ್ಲಿ ಸಿಲುಕಿದ್ದ ಚಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.
ಕೊಣನೂರು ಕಡೆಯಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ವಾಹನ ಚಾಲಕನ ಅಜಾಗರೂಕತೆಯಿಂದ ರಸ್ತೆ ಬದಿ ಇದ್ದ ರಂಗನಾಥ್ ಅವರ ವಾಸದ ಮನೆಯೊಳಗೆ ನುಗ್ಗಿದೆ. ಕುಟುಂಬದ ಸದಸ್ಯರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಜ್ಜುಗುಜ್ಜಾದ ವಾಹನದಲ್ಲಿ ಚಾಲಕ ದೀಪಕ್ ಸಿಲುಕಿಕೊಂಡು ಹೊರ ಬರಲಾರದೆ ಒದ್ದಾಡುತ್ತಿದ್ದ. ಸುದ್ದಿ ತಿಳಿದ ಅಗ್ನಿಶಾಮಕ ಠಾಣೆ ಅಧಿಕಾರಿ ಪರಮೇಶ್ವರಗೌಡ ಮತ್ತು ಸಿಬ್ಬಂದಿ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಚಾಲಕನನ್ನು ರಕ್ಷಣೆ ಮಾಡಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರು.
ಈತ ಚಿಕ್ಕಮಗಳೂರು ಜಿಲ್ಲೆ ಅಂಬಳೆ ಹೋಬಳಿ ಸಿರಗಾಪುರ ಗ್ರಾಮದವ ಎನ್ನಲಾಗಿದೆ.