ಅರಸೀಕೆರೆ ಗ್ರಾಮಾಂತರದ ಹಾರನಹಳ್ಳಿ ಗ್ರಾಮದ ಶ್ರೀತರಳಬಾಳು ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬುಧವಾರ ಆಯೋಜಿಸಿದ್ದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಹಾರನಹಳ್ಳಿ ಡಾ.ಮಲ್ಲಪ್ಪ, ಶೇಖರಪ್ಪ, ಅಕ್ಷತಾ ರೈ ಇತರರು ಇದ್ದರು.
ಅರಸೀಕೆರೆ ಗ್ರಾಮಾಂತರ: ಆಹಾರ ಸೇವನೆಯಲ್ಲಿ ಇತಿಮಿತಿ ಹಾಗೂ ದುಶ್ಚಟಗಳಿಂದ ದೂರ ಇದ್ದರೆ ವೈದ್ಯರ ಬಳಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದು ವೈದ್ಯ ಹಾರನಹಳ್ಳಿ ಡಾ.ಮಲ್ಲಪ್ಪ ಹೇಳಿದರು.
ತಾಲೂಕಿನ ಹಾರನಹಳ್ಳಿ ಗ್ರಾಮದ ಶ್ರೀತರಳಬಾಳು ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬುಧವಾರ ಆಯೋಜಿಸಿದ್ದ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ತಂಬಾಕು ಸೇವನೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಕ್ಯಾನ್ಸರ್ ಬಂದರೆ ಕ್ಯಾನ್ಸಲ್ ಎಂದೇ ಅರ್ಥ. ತಂಬಾಕಿನ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಸಿರಿಧಾನ್ಯ ಬಳಕೆಯಿಂದ ಆರೋಗ್ಯವಂತರಾಗಿ ಇರಲು ಸಾಧ್ಯವಾಗುತ್ತದೆ. ಸಿರಿಧಾನ್ಯಕ್ಕೆ ಆದ್ಯತೆ ನೀಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯು ಜಾಗೃತಿ ಮೂಡಿಸುವ ಮತ್ತು ಸಿರಿಧಾನ್ಯ ನೀಡುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕ ಶೇಖರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಬೇಕು. ತಂಬಾಕು ಬಳಕೆ ಪ್ರಾಣಕ್ಕೆ ಅಪಾಯಕಾರಿ ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಅಕ್ಷತಾ ರೈ ಮಾತನಾಡಿದರು. ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಎಚ್.ಡಿ ಸೀತಾರಾಂ, ಮೇಲ್ವಿಚಾರಕ ನಾಗಭೂಷಣ್, ಪಂಕಜಾ, ನವೀನ, ಶಿಕ್ಷಕಿ ಸೀಮಾ ಇತರರು ಇದ್ದರು.