ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಿಟಿಎಂ ಕೊಪ್ಪಲು ಗ್ರಾಮದಲ್ಲಿ ಬುಧವಾರ ಆನೆಕಾಲು ರೋಗ ಪತ್ತೆಗಾಗಿ ವಿಶೇಷ ರಕ್ತಲೇಪನ ಸಂಗ್ರಹಣಾ ಕಾರ್ಯ ಆಯೋಜಿಸಲಾಗಿತ್ತು.
ಗ್ರಾಮಕ್ಕೆ ಆಂಧ್ರಪ್ರದೇಶದಿಂದ ತಂಬಾಕು ಕೆಲಸಕ್ಕಾಗಿ ಆಗಮಿಸಿರುವ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಿ, ಆರೋಗ್ಯ ಸಿಬ್ಬಂದಿ ರಾತ್ರಿ ವೇಳೆ ರಕ್ತಲೇಪನದ ಮಾದರಿಗಳನ್ನು ಸಂಗ್ರಹಿಸಿದರು.
ಆರೋಗ್ಯ ನಿರೀಕ್ಷಕ ಎಚ್.ಎಸ್.ರವಿ ಮಾತನಾಡಿ, ಆನೆಕಾಲು ರೋಗವು ಸೊಳ್ಳೆಗಳ ಮೂಲಕ ಹರಡುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕೆಲಸಕ್ಕಾಗಿ ಗ್ರಾಮಗಳಿಗೆ ಆಗಮಿಸುವ ಕಾರ್ಮಿಕರನ್ನೂ ನಿಯಮಿತವಾಗಿ ತಪಾಸಣೆಗೊಳಪಡಿಸುವ ಮೂಲಕ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಸಾರ್ವಜನಿಕರು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಹಕರಿಸಿ, ರಕ್ತ ಪರೀಕ್ಷೆ ಸೇರಿದಂತೆ ಅಗತ್ಯ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಆರೋಗ್ಯ ಸುರಕ್ಷಾಧಿಕಾರಿ ಮಮತಾ, ಸಮುದಾಯ ಆರೋಗ್ಯಾಧಿಕಾರಿ ಅನಿಲ್, ಆಶಾ ಕಾರ್ಯಕರ್ತೆ ತಿಲೋತ್ತಮೆ ಹಾಗೂ ಗ್ರಾಮಸ್ಥರು ಹಾಜರಿದ್ದರು.