ಬೇಲೂರು : ಪಟ್ಟಣದ ಶಿವಜ್ಯೋತಿ ಪಣ ಗಾಣಿಗರ ಸಂಘದಿಂದ ವ್ಯಾಸ ಪೂರ್ಣಿಮೆ ಅಂಗವಾಗಿ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿ, ದಾಸೋಹ ಭವನದಲ್ಲಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಗಾಣಿಗ ಸಮುದಾಯದಿಂದ ಶತಮಾನದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ವ್ಯಾಸ ಪೂರ್ಣಿಮೆ ದಿನದಂದು ಗಾಣಿಗರ ಸಂಘದ ಎಲ್ಲ ಸದಸ್ಯರು ಕುಟುಂಬ ಸಮೇತ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿ ದೇವರಿಗೆ ವಿಶೇಷವಾಗಿ ಅಭಿಷೇಕ ನೆರವೇರಿಸಿದ ನಂತರ, ಭಕ್ತರ ಸಮ್ಮುಖದಲ್ಲಿ ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಶ್ರೀ ನಿವಾಸ್ ಭಟ್ಟರ್ ಮಾತನಾಡಿ, ವ್ಯಾಸ ಪೂರ್ಣಿಮೆ ದಿನವೂ ಅತ್ಯಂತ ಪವಿತ್ರ ದಿನವಾಗಿದ್ದು, ವ್ಯಾಸ ಮಹರ್ಷಿಗಳು ಈ ದಿನದಂದು ಹಿಂದೂಗಳ ಪವಿತ್ರ ಗ್ರಂಥ ಮಹಾಭಾರತವನ್ನು ಲೋಕಕ್ಕೆ ಸಮರ್ಪಿಸಿದ ದಿನವಾಗಿದೆ. ಅಂತಹ ಮಹಾನ್ ವ್ಯಾಸ ಗುರುಗಳನ್ನು ಸ್ಮರಿಸುವ ಈ ದಿನದಂದು ಗಾಣಿಗರ ಸಮುದಾಯದವರು ಹಿರಿಯರಿಂದ ಬಂದ ಸಂಪ್ರದಾಯದಂತೆ ಪ್ರತಿ ವರ್ಷವೂ ಶ್ರೀ ಚನ್ನಕೇಶವಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿಕೊಂಡು ವ್ಯಾಸ ಪೂರ್ಣಿಮೆ ಆಚರಿಸಿ ಕೊಂಡು ಬರುತ್ತಿದ್ದಾರೆ ಎಂದರು.
ಗಾಣಿಗರ ಸಂಘದ ಜಂಟಿ ಕಾರ್ಯದರ್ಶಿ ಎನ್.ಅನಂತು ಮಾತನಾಡಿ, ಒಂದು ಶತಮಾನಕ್ಕೂ ಹಿಂದಿನಿಂದಲೂ ವ್ಯಾಸ ಪೂರ್ಣಿಮೆಯನ್ನು ನಮ್ಮ ಸಮುದಾಯದವರು ಆಚರಿಸಿಕೊಂಡು ಬರುತಿದ್ದಾರೆ. ಅದರಂತೆ ನಾವುಗಳು ಸಹ ಹಿರಿಯರ ಮಾರ್ಗದರ್ಶನದಂತೆ ವ್ಯಾಸ ಪೂರ್ಣಿಮೆಯಂದು ಶ್ರೀ ಚನ್ನಕೇಶವಸ್ವಾಮಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಗುರು ವಂದನೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
ದೇವಾಲಯದ ಅರ್ಚಕ ನರಸಿಂಹಪ್ರಿಯ ಭಟ್ಟರ್, ಗಾಣಿಗರ ಸಂಘದ ಅಧ್ಯಕ್ಷ ಬಿ.ಎಲ್.ನಾಗರಾಜ್, ಪುರಸಭೆ ಸದಸ್ಯ ಪ್ರಭಾಕರ್, ಸಂಘದ ಸದಸ್ಯರಾದ ಜಗದೀಶ್, ಚಂದ್ರಶೇಖರ್, ನಂಜುಂಡ, ಜೀವನ್, ಕೇಶವ, ಯಶವಂತ್ ಸೇರಿದಂತೆ ಇತರರಿದ್ದರು.