ಚೆಕ್‌ಡ್ಯಾಂ, ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ

ಬೇಲೂರು ತಾಲೂಕಿನ ಕಾನಹಳ್ಳಿ ಸಮೀಪದ ಹಳ್ಳಕ್ಕೆ ಅಡ್ಡಲಾಗಿ ಚೆಕ್‌ಡ್ಯಾಂ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಸರೋಜಾ, ರೂಪಾ, ರಿಹಾನ್ ಪಾಷ, ತೇಜಪಾಲ್, ರಘು, ಯೋಗೀಶ್, ಅಶೋಕ್ ಇದ್ದರು.
ಬೇಲೂರು ತಾಲೂಕಿನ ಕಾನಹಳ್ಳಿ ಸಮೀಪದ ಹಳ್ಳಕ್ಕೆ ಅಡ್ಡಲಾಗಿ ಚೆಕ್‌ಡ್ಯಾಂ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಸರೋಜಾ, ರೂಪಾ, ರಿಹಾನ್ ಪಾಷ, ತೇಜಪಾಲ್, ರಘು, ಯೋಗೀಶ್, ಅಶೋಕ್ ಇದ್ದರು.
Published on
ಬೇಲೂರು: ತಾಲೂಕಿನ ಮಲಸಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಹಳ್ಳಿ ಸಮೀಪದ ಹಳ್ಳಕ್ಕೆ ಅಡ್ಡಲಾಗಿ ಚೆಕ್‌ಡ್ಯಾಂ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ಸ್ವಾತಂತ್ರ್ಯ ಬಂದಾಗಿನಿಂದ ಕಾನಹಳ್ಳಿ ಹಳ್ಳಕ್ಕೆ ಸೇತುವೆ ಇಲ್ಲದೆ ಈ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರು 11 ಕಿಲೋ ಮೀಟರ್ ಸುತ್ತಿ ಬಳಸಿ ಸಂಚರಿಸುತ್ತಿದ್ದಾರೆ. ಶಾಲಾ ಮಕ್ಕಳು, ರೈತರು ಪರಿತಪಿಸುತ್ತಿದ್ದರು. ಈ ವಿಷಯವನ್ನು ಕಾಫಿ ಬೆಳೆಗಾರರ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ತೀರ್ಥಮಲ್ಲೇಶ್ ಅವರು ನನ್ನ ಗಮನಕ್ಕೆ ತಂದಾಗ ಇಂಜಿನಿಯರ್‌ಗಳನ್ನು ಸ್ಥಳಕ್ಕೆ ಕಳುಹಿಸಿ ಸರ್ವೇ ಮಾಡಿಸಿ ಸೇತುವೆ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ 1 ಕೋಟಿ ರೂ. ಅನುದಾನದಲ್ಲಿ ಚೆಕ್‌ಡ್ಯಾಂ ಹಾಗೂ ಪಂಚಾಯತ್ ರಾಜ್ ಇಲಾಖೆಯ 10 ಲಕ್ಷ ರೂ. ಅನುದಾನದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಇದರ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಮಲಸಾವರ ಗ್ರಾಮ ಪಂಚಾಯಿತಿ ಸದಸ್ಯ ಭೂಪಾಲ್ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯ ಸೀಗೆಹಳ್ಳಿ, ಕಾನಹಳ್ಳಿ, ಬಸೂರ, ಉಂಬಳಗೋಡು, ಹಿರಿಸಿಗರ, ಗೋಣಿಬೀಡು, ಚಿಮ್ಮಟ್ಟಗೆರೆ ಸೇರಿದಂತೆ ಸಾಕಷ್ಟು ಗ್ರಾಮಗಳಿಗೆ ಕಾನಹಳ್ಳಿ ಸಮೀಪ ಸೇತುವೆ ನಿರ್ಮಾಣದಿಂದ ಅನುಕೂಲವಾಗುತ್ತದೆ. ಸೇತುವೆ ಇಲ್ಲದ ಕಾರಣ ಪಾಳು ಬಿಟ್ಟಿರುವ ಜಮೀನುಗಳನ್ನು ಈಗ ಉಳುಮೆ ಮಾಡಲು ಸಹಾಯವಾಗುತ್ತದೆ ಎಂದರು.
ಕಾಫಿ ಬೆಳೆಗಾರರ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ತೀರ್ಥಮಲ್ಲೇಶ್ ಮಾತನಾಡಿ, ಇಲ್ಲಿಯವರೆಗೂ ಯಾವ ಶಾಸಕರು ಸಹ ಈ ಸೇತುವೆ ನಿರ್ಮಾಣದ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಎಚ್.ಕೆ.ಸುರೇಶ್ ಅವರು ಈ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದರು.
ಮಲಸಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ, ಸದಸ್ಯರಾದ ರೂಪಾ, ಅಭಿವೃದ್ಧಿ ಅಕಾರಿ ರಿಹಾನ್ ಪಾಷ, ಗ್ರಾಮಸ್ಥರಾದ ತೇಜಪಾಲ್, ರಘು, ಯೋಗೀಶ್, ಅಶೋಕ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net