ಅರಕಲಗೂಡು: ಪಟ್ಟಣದ ಪ್ರಸನ್ನ ನಂಜುಂಡೇಶ್ವರಸ್ವಾಮಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಶ್ರೀ ಶಿರಡಿ ಸಾಯಿ ಸಮಿತಿ ಸಹಯೋಗದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಡಿವೋಷನಲ್ ಭಜನ್ ಜ್ಯಾಮಿಂಗ್ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.
ವಿದುಷಿ ರಶ್ಮಿ ಅವಿನಾಶ್ ಮತ್ತವರ ತಂಡದ ಕಲಾವಿದರು ನಡೆಸಿಕೊಟ್ಟ ಭಜನೆ ನೆರೆದಿದ್ದ ಭಕ್ತರನ್ನು ಭಕ್ತಿರಸದಲ್ಲಿ ತೇಲುವಂತೆ ಮಾಡಿತು. ವಿವಿಧ ದೇವರ ನಾಮಸ್ಮರಣೆ, ಭಕ್ತಿಗೀತೆಗಳು ಹಾಗೂ ಸಂಗೀತಮಯ ಭಜನೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಮೂಡಿಸಿತು. ಭಜನೆಗೆ ಆಗಮಿಸಿದ್ದ ಭಕ್ತರು ತಾಳ ಹಾಕಿ ದೇವರ ಸ್ಮರಣೆ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸಂಜೆ ವೇಳೆ ಆಯೋಜಿಸಿದ್ದ ಭಜನಾ ಸೇವೆಯಲ್ಲಿ ಸ್ಥಳೀಯ ಭಕ್ತರು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀ ಶಿರಡಿ ಸಾಯಿ ಸೇವಾ ಸಮಿತಿಯ ಪ್ರಮುಖರಾದ ಸುನಂದಾ ಮಾತನಾಡಿ, ಸಂಗೀತದ ಮೂಲಕ ಧಾರ್ಮಿಕ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಆ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಭಜನೆ ಪರಂಪರೆ ಸಮಾಜದಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಭಕ್ತರ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿತು.