ಶಿಸ್ತನ್ನು ಮೈಗೂಡಿಸಿಕೊಂಡಾಗ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ

ಹೊಳೆನರಸೀಪುರ  ಪಟ್ಟಣದ ಸೋಷಿಯಲ್ ಕ್ಲಬ್  ಸ್ನೇಹ ಸದನ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ   ‘ಸೋಷಿಯಲ್ ಕ್ಲಬ್ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸೋಮಲಿಂಗೇಗೌಡ, ರೇಣುಕುಮಾರ್, ಹೊನ್ನಪ್ಪ, ಇತರರು ಇದ್ದರು.
ಹೊಳೆನರಸೀಪುರ ಪಟ್ಟಣದ ಸೋಷಿಯಲ್ ಕ್ಲಬ್ ಸ್ನೇಹ ಸದನ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ‘ಸೋಷಿಯಲ್ ಕ್ಲಬ್ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸೋಮಲಿಂಗೇಗೌಡ, ರೇಣುಕುಮಾರ್, ಹೊನ್ನಪ್ಪ, ಇತರರು ಇದ್ದರು.
Published on
ಹೊಳೆನರಸೀಪುರ: ಪಠ್ಯ ವಿಷಯ ಹಾಗೂ ಪ್ರಾಯೋಗಿಕ ಜ್ಞಾನ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡಾಗ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ತಿಳಿಸಿದರು.
ಪಟ್ಟಣದ ಸ್ನೇಹ ಸದನ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಸೋಷಿಯಲ್ ಕ್ಲಬ್ ಪ್ರತಿಭಾ ಪುರಸ್ಕಾರ ಸಮಾರಂಭ-2026’ ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಳೆದ ಹಲವಾರು ವರ್ಷಗಳಿಂದ ಸೋಷಿಯಲ್ ಕ್ಲಬ್ ಕೇವಲ ಮನೋರಂಜನೆಗೆ ಸೀಮಿತವಾಗದೆ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಪೋಷಕರ ಅವಿರತ ಶ್ರಮ ಮತ್ತು ತ್ಯಾಗವಿದ್ದು, ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮಾತನಾಡಿ, "ಕ್ಲಬ್ ವತಿಯಿಂದ ಪ್ರತಿ ವರ್ಷ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಅನ್ನು ಕೇವಲ ವಿದ್ಯಾಭ್ಯಾಸಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟು ಮಾತ್ರ ಬಳಸಬೇಕು" ಎಂದು ತಿಳಿಸಿದರು. ಪುಸ್ತಕ ಓದುವುದರ ಜೊತೆಗೆ ಗಣ್ಯರ ಹಿತನುಡಿಗಳನ್ನು ಆಲಿಸುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನ ಭಾಷಣಕಾರರಾಗಿದ್ದ ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಬಿ.ಎಸ್. ಮಾತನಾಡಿ, "ಇಂದಿನ ಪೀಳಿಗೆಯ ಮಕ್ಕಳಿಗೆ ಎಲ್ಲಾ ಸೌಲಭ್ಯಗಳಿರುವುದರಿಂದ ಜೀವನದ ಕಷ್ಟಗಳ ಅನುಭವವಾಗುತ್ತಿಲ್ಲ. ಪೋಷಕರು ಮಾಡಿಕೊಟ್ಟ ಆಸ್ತಿಯ ಮೇಲೆ ಅವಲಂಬಿತರಾಗದೆ ಸ್ವಂತ ಪರಿಶ್ರಮದಿಂದ ಬದುಕನ್ನು ರೂಪಿಸಿಕೊಳ್ಳಬೇಕು" ಎಂದರು.
" ಕಠಿಣ ಸಮಯವು ಬಲಿಷ್ಠ ವ್ಯಕ್ತಿಗಳನ್ನು ರೂಪಿಸಿದರೆ, ಸುಖದ ಕಾಲವು ದುರ್ಬಲ ವ್ಯಕ್ತಿಗಳನ್ನು ಸೃಷ್ಟಿಸುತ್ತದೆ," ಎಂಬ ಜೀವನ ಚಕ್ರದ ಸಿದ್ಧಾಂತವನ್ನು ಉಲ್ಲೇಖಿಸಿದ ಅವರು, ಸರ್ಕಾರಿ ಕಾಲೇಜುಗಳಲ್ಲಿ ಲಭ್ಯವಿರುವ ಫೋರೆನ್ಸಿಕ್ ಸೈನ್ಸ್, ಕ್ರಿಮಿನಾಲಜಿ ಮತ್ತು ಫುಡ್ ಸೈನ್ಸ್‌ನಂತಹ ಅತ್ಯುತ್ತಮ ಉಚಿತ ಕೋರ್ಸ್‌ಗಳು ಹಾಗೂ ವಾರ್ಷಿಕ 40 ರಿಂದ 50 ಸಾವಿರ ರೂ.ವರೆಗೆ ಸಿಗುವ 'ದೀಪಿಕಾ' ವಿದ್ಯಾರ್ಥಿವೇತನದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಾದಿ ಮುಖ್ಯ
ಕ್ಲಬ್ನ ಕಾರ್ಯದರ್ಶಿ ಕೆ. ಸುದರ್ಶನ ಬಾಬು ಮಾತನಾಡಿ, "ಹಿಂದಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರೆ ಸರ್ಕಾರಿ ಕೆಲಸ ಖಚಿತ ಎಂಬ ನಂಬಿಕೆ ಇತ್ತು. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೇ. 90 ಅಥವಾ 99 ರಷ್ಟು ಅಂಕ ಗಳಿಸಿದರೂ ಮುಂದಿನ ಹಾದಿಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಪರಿಸ್ಥಿತಿ ಇದೆ" ಎನ್ನುತ್ತಾ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮುಗಿಸಿದ ನಂತರ ಉತ್ತಮ ಹಾದಿಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕ್ಲಬ್ನ ಅಧ್ಯಕ್ಷರಾದ ಕೆ.ಎಂ. ಹೊನ್ನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಷಿಯಲ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಕ್ರೀಡಾಂಗಣವನ್ನು (Court) ಉಚಿತವಾಗಿ ಬಳಸಲು ಅವಕಾಶ ನೀಡಲಾಗುತ್ತಿದ್ದು, ಇಲ್ಲಿ ತರಬೇತಿ ಪಡೆದ ಮಕ್ಕಳು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹೋಮ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿಯರು ಕಳೆದ ಮೂರು ವರ್ಷಗಳಿಂದ ಯೂನಿವರ್ಸಿಟಿ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಸಾಧನೆ ಮಾಡುತ್ತಿದ್ದು, ಅವರಿಗೆ ಕ್ಲಬ್ ನೆರವು ನೀಡುತ್ತಿದೆ ಎಂದು ಕ್ಲಬ್ನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಸಾಧಕ ಪ್ರತಿಭೆಗಳಿಗೆ ಪುರಸ್ಕಾರ
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಾಲ್ಲೂಕಿನ ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಶೇ.85 ಕ್ಕಿಂತ ಹೆಚ್ಚು ಅಂಕ ಗಳಿಸಿದ ಕ್ಲಬ್ ಸದಸ್ಯರು. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಂಕರ್ ಐತಾಳ್ ಅವರು ಸೋಷಿಯಲ್ ಕ್ಲಬ್ ನಡೆದು ಬಂದ ದಾರಿ ಮತ್ತು ಸಾಮಾಜಿಕ ಸೇವೆಗಳ ಕುರಿತು ಸವಿವರವಾಗಿ ವಿವರಿಸಿದರು.
ವೇದಿಕೆಯಲ್ಲಿ ಸೋಷಿಯಲ್ ಕ್ಲಬ್ನ ಕಾರ್ಯದರ್ಶಿ ಕೆ.ಆರ್. ಸುದರ್ಶನ್ ಕುಮಾರ್, ವೆಂಕಟೇಶ್,ಆಡಳಿತ ಮಂಡಳಿಯ ಸದಸ್ಯರು, ವಿವಿಧ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು, ಉಪನ್ಯಾಸಕರು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net