ಅಭಿವೃದ್ಧಿ ಕಾಮಗಾರಿಗಳು ಅವೈಜ್ಞಾನಿಕವಾಗಿವೆ

ಎಂ.ಆರ್.ವೆಂಕಟೇಶ್, ಮಾಜಿ ಅಧ್ಯಕ್ಷ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ
ಎಂ.ಆರ್.ವೆಂಕಟೇಶ್, ಮಾಜಿ ಅಧ್ಯಕ್ಷ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ
Published on
ಬೇಲೂರು : ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಅವೈಜ್ಞಾನಿಕವಾಗಿವೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಹೇಳಿದರು.
ಬೇಲೂರು ಪುರಾತನ, ಐತಿಹಾಸಿಕ ಪಟ್ಟಣವಾಗಿದೆ. ಕೋಟೆ, ಕಂದಕಗಳಿದ್ದು, ಸುತ್ತಲೂ ಸಣ್ಣಪುಟ್ಟ ಬೀದಿಗಳಿವೆ. ಇಂತಹ ಸ್ಥಳದಲ್ಲಿ ಕಾಮಗಾರಿ ಮಾಡುವಾಗ ಸೂಕ್ತ ಅಧ್ಯಯನ, ಜನಪ್ರತಿನಿಧಿಗಳ ಸಲಹೆ, ವೈಜ್ಞಾನಿಕ ಯೋಜನೆ ಅಗತ್ಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಟ್ಟಣದಲ್ಲಿ ಕಾಮಗಾರಿ ನಡೆಸಲು ಹಿಂದಿನ ಅವಧಿಯ ಶಾಸಕ ಕೆ.ಎಸ್.ಲಿಂಗೇಶ್ ಅವರು
7 ಕೋಟಿ ರೂ. ಅನುದಾನ ತಂದಿದ್ದರು. ಆಗ ಯಾವ ರೀತಿ ಕಾಮಗಾರಿ ಮಾಡಬೇಕೆಂದು ಚರ್ಚಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕಾಮಗಾರಿ ನಡೆಯಲಿಲ್ಲ. ಈಗ ಪುರಸಭೆ ಸದಸ್ಯರ, ಸಾರ್ವಜನಿಕರ ಸಲಹೆ ಪಡೆಯದೆ ಶಾಸಕರು ಏಕಮುಖ ನಿರ್ಧಾರ ತೆಗೆದು ಕೊಳ್ಳುತ್ತಿದ್ದಾರೆ ಎಂದು ದೂರಿದರು.
ಬಿಕ್ಕೋಡು ರಸ್ತೆಗೆ 3 ಕೋಟಿ ರೂ. ಅನುದಾನ ತಂದಿದ್ದರೂ, ಅಲ್ಲಿ ನಡೆಯುತ್ತಿರುವ ಕಾಮಗಾರಿ ಹಾವು-ಏಣಿ ಆಟದಂತಿದೆ. ರಸ್ತೆ ಸಮತಟ್ಟಾಗಿಲ್ಲ. ಪಕ್ಕದ ರಸ್ತೆಗಳಿಗೂ ಸಂಪರ್ಕ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಸಂದರ್ಭ ಜನರಿಗೆ ತೊಂದರೆ ಆಗದಂತೆ ನೋಡಿ ಕೊಳ್ಳಬೇಕು. ಆದರೆ ಇಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಕೆಲವರಿಗೆ ಎರಡು ಅಡಿ ಜಾಗ ಬಿಟ್ಟರೆ, ಕೆಲವರ ಮನೆಗಳ ಕಾಂಪೌಂಡ್ ಹಾಗೂ ರಸ್ತೆ ಒಡೆಯಲಾಗಿದೆ. ಯಾವ ರಸ್ತೆಗೆ ಮೊದಲು ಕಾಮಗಾರಿ ಮಾಡಬೇಕು ಎಂಬ ಅರಿವಿಲ್ಲದೆ ಕೆಲಸ ನಡೆಯುತ್ತಿದೆ. ಉತ್ತಮವಾಗಿರುವ ರಸ್ತೆ ಒಡೆದು, ಹಾಳಾದ ರಸ್ತೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ಇದಕ್ಕೆ ರಾಜಕೀಯ ಪಕ್ಷಪಾತವೇ ಕಾರಣ ಎಂಬ ಅನುಮಾನ ಮೂಡುತ್ತಿದೆ ಎಂದು ಎಂ.ಆರ್.ವೆಂಕಟೇಶ್ ದೂರಿದರು.
ಕಾಮಗಾರಿಯಲ್ಲಿ ಅಕ್ರಮ ನಡೆಯುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ಶಾಸಕರ ವರ್ತನೆಯಿಂದಾಗಿ ಕೆಲ ಗುತ್ತಿಗೆದಾರರು ಕೆಲಸ ಮಾಡಲು ಹೆದರುತ್ತಿದ್ದಾರೆ. 13ನೇ ವಾರ್ಡ್‌ನ ರಸ್ತೆಗಳ ಸ್ಥಿತಿ ಅತ್ಯಂತ ಕಳಪೆಯಾಗಿದೆ. ಅಮಾಯಕ ಜನರ ಮನೆಗಳ ಕಾಂಪೌಂಡ್ ಒಡೆದು ರಸ್ತೆ ಮಾಡುವುದನ್ನು ನಿಲ್ಲಿಸಬೇಖು ಎಂದು ಅವರು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net