ಟೀಕೆ, ಟಿಪ್ಪಣಿಗಳಿಗೆ ಕಿವಿಗೊಡದೆ ಶಾಂತಿ ಸುವ್ಯವಸ್ಥೆ ಕಾಪಾಡಿ

ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆ ಆವರಣ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡುತ್ತಿರುವ ಸಕಲೇಶಪುರ ಉಪ ವಿಭಾಗಾಧಿಕಾರಿ, ದೇಗುಲದ ಆಡಳಿತಾಧಿಕಾರಿ ಮಂಜುನಾಥ್. ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಅರಸೀಕೆರೆ ಡಿವೈಎಸ್‌ಪಿ ಗೋಪಿ, ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ ಮತ್ತಿತರರಿದ್ದರು.
ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆ ಆವರಣ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡುತ್ತಿರುವ ಸಕಲೇಶಪುರ ಉಪ ವಿಭಾಗಾಧಿಕಾರಿ, ದೇಗುಲದ ಆಡಳಿತಾಧಿಕಾರಿ ಮಂಜುನಾಥ್. ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಅರಸೀಕೆರೆ ಡಿವೈಎಸ್‌ಪಿ ಗೋಪಿ, ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ ಮತ್ತಿತರರಿದ್ದರು.
Published on
ಬೇಲೂರು: ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಯಶಸ್ಸಿಗಾಗಿ ಈಗಾಗಲೇ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ. ಏನಾದರೂ ಸಮಸ್ಯೆಗಳಿದ್ದರೆ ತಿಳಿಸಿದರೆ ಬಗೆಹರಿಸಲಾಗುವುದು. ಜತೆಗೆ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕಿದೆ ಎಂದು ಸಕಲೇಶಪುರ ಉಪ ವಿಭಾಗಾಧಿಕಾರಿ, ಶ್ರೀಚನ್ನಕೇಶವಸ್ವಾಮಿ ದೇಗುಲದ ಆಡಳಿತಾಧಿಕಾರಿ ಮಂಜುನಾಥ್ ಸಲಹೆ ನೀಡಿದರು.
ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆ ಆವರಣ ತಾಲೂಕು ಆಡಳಿತದಿಂದ ಶನಿವಾರ ಏರ್ಪಡಿಸಿದ್ದ ವಿವಿಧ ಸಂಘಟನೆಗಳು, ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಬೇಲೂರಿನಲ್ಲಿ ಮಾ.23ರಿಂದ ದೇವರ ವಿವಿಧ ಉತ್ಸವಗಳು ನಡೆಯುತ್ತಿದ್ದು, ಭಕ್ತರು ಸಂತೋಷದಿಂದ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲರ ಅಭಿಪ್ರಾಯದಂತೆ ಬೇಲೂರು ಪಟ್ಟಣ ಸೇರಿದಂತೆ ದೇಗುಲಕ್ಕೆ ದೀಪಾಲಂಕಾರ ಮಾಡಿಸಲಾಗಿದೆ. ರಥೋತ್ಸವದಂದು ಸಾವಿರಾರು ಭಕ್ತರು ಬರುವುದರಿಂದ ಕುಡಿಯುವ ನೀರು, ಸ್ವಚ್ಛತೆ, ತಾತ್ಕಾಲಿಕ ಶೌಚಗೃಹ, ವಾಹನ ನಿಲುಗಡೆ, ಆರೋಗ್ಯ ಸೇವೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕಲ್ಯಾಣಿ ಸಮೀಪ ಭಕ್ತರ ಅನುಕೂಲಕ್ಕಾಗಿ ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ನೇಮಿಸಲಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಿಸಲು ಸ್ಥಳೀಯ ವಾಹನಗಳನ್ನು ಜೂನಿಯರ್ ಕಾಲೇಜು ಆವರಣ, ಪ್ರವಾಸಿಗರಿಗೆ ದೇವಾಲಯದ ಹಿಂಭಾಗ, ಸಂತೆ ಮೈದಾನ, ಚನ್ನಕೇಶವ ವಸತಿ ನಿಲಯ, ಕೆಂಪೇಗೌಡ ರಸ್ತೆ ಪಕ್ಕದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ದೇವಾಲಯದ ಸುತ್ತ 8 ರಸ್ತೆಗಳಲ್ಲಿ ಮಾ.27ರಿಂದ ಏ.2ರ ವರೆಗೆ ವೈಕುಂಠ ಬೀದಿ, ಕೆರೆಬೀದಿ, ಮಸೀದಿ ರಸ್ತೆ, ದೇವಸ್ಥಾನದ ಮುಂಭಾಗದ ರಸ್ತೆ, ದೇವಸ್ಥಾನದ ಬಲ ಮತ್ತು ಎಡ ಭಾಗದ ರಸ್ತೆ, ಹಿಂಭಾಗದ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಸಾರ್ವಜನಿಕರು, ಭಕ್ತರು ಸಹಕಾರ ನೀಡಬೇಕು ಎಂದರು.
ಅರಸೀಕೆರೆ ಡಿವೈಎಸ್‌ಪಿ ಗೋಪಿ ಮಾತನಾಡಿ, ಜಾತ್ರಾ ಮಹೋತ್ಸವದ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಿದ್ದು, ಏನಾದರೂ ಘಟನೆಗಳು ನಡೆಯುವುದು ಕಂಡುಬಂದಲ್ಲಿ ನನಗಾಗಲಿ, ಇನ್‌ಸ್ಪೆಕ್ಟರ್‌ಗಾಗಲಿ ಅಥವಾ 112ಗೆ ಕರೆಮಾಡಿ. ಪೋಲಿಸರ ಜತೆ ವಾದ ವಿವಾದ ಮಾಡದೆ ಸ್ಥಳೀಯರು ಸಹಕಾರ ನೀಡಬೇಕು. ರಥ ಎಳೆಯುವಾಗ ಅವಘಡಗಳು ನೆಡೆಯದಂತೆ ಅಧಿಕಾರಿಗಳು ಸೇರಿ ಶ್ರಮ ವಹಿಸುತ್ತೇವೆ ಎಂದರು.
ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಮಾತನಾಡಿ, ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರು ಸಹಕರಿಸಿ ಯಾವುದೇ ಅಹಿತಕರ ಘಟನೆಯ ಸನ್ನಿವೇಶ ಕಂಡುಬಂದಲ್ಲಿ ಸ್ವತಃ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ನಮಗೆ ತಿಳಿಸಿ ಸಹಕರಿಸಿ. ಪಾರ್ಕಿಂಗ್‌ಗೆ ಈಗಾಗಲೇ ಹಲವಾರು ಸ್ಥಳಗಳನ್ನು ಗುರುತಿಸಿದ್ದು, ಅಲ್ಲಿಯೇ ಎಲ್ಲರೂ ವಾಹನಗಳ ಪಾರ್ಕಿಂಗ್ ಮಾಡಬೇಕು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸರಗಳ್ಳತನಕ್ಕಿಂತ ಮೊಬೈಲ್ ಕಳವು ಜಾಸ್ತಿಯಾಗಿದ್ದು, ಇಎಮ್‌ಇಐ ನಂಬರ್ ಇದ್ದರೂ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ರಥ ಎಳೆಯುವಾಗ ಜಾಗರೂಕತೆಯಿಂದ ಇರಬೇಕು. ಭದ್ರತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ವೀರಾಂಜನೇಯ ಸೇವಾ ಸಮಿತಿ ಅಧ್ಯಕ್ಷ ಮೋಹನ್, ಪುರಸಭೆ ಸದಸ್ಯ ಜಮಾಲ್ ಮಾತನಾಡಿದರು.
ಶ್ರೀಚನ್ನಕೇಶವಸ್ವಾಮಿ ದೇಗುಲದ ಇಒ ಯೋಗೆಶ್, ಮುಖಂಡರಾದ ನಾಗೇಶ್, ವೆಂಕಟೇಶ್, ಅಬ್ದುಲ್ ಖಾದರ್, ಮೀಸೆ ಮಹೇಶ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net