ಪಟ್ಟಿಯಲ್ಲಿ ಮತದಾರರ ಹೆಸರು ಕೈತಪ್ಪದಂತೆ ಎಚ್ಚರವಹಿಸಿ

ಅರಕಲಗೂಡಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಬಿ.ಎಲ್.ಎ-2 ಜಾಗೃತಿ ಸಭೆಯನ್ನು ಸಂಸದ ಶ್ರೇಯಸ್ ಎಂ. ಪಟೇಲ್ ಉದ್ಘಾಟಿಸಿದರು. ಎಚ್.ಎಂ. ರೇವಣ್ಣ, ಲಕ್ಷ್ಮಣ್, ಪಟೇಲ್ ಶಿವಪ್ಪ, ಮಂಜೇಗೌಡ, ಎಚ್.ಪಿ. ಶ್ರೀಧರ್ ಗೌಡ ಇತರರಿದ್ದರು.
ಅರಕಲಗೂಡಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಬಿ.ಎಲ್.ಎ-2 ಜಾಗೃತಿ ಸಭೆಯನ್ನು ಸಂಸದ ಶ್ರೇಯಸ್ ಎಂ. ಪಟೇಲ್ ಉದ್ಘಾಟಿಸಿದರು. ಎಚ್.ಎಂ. ರೇವಣ್ಣ, ಲಕ್ಷ್ಮಣ್, ಪಟೇಲ್ ಶಿವಪ್ಪ, ಮಂಜೇಗೌಡ, ಎಚ್.ಪಿ. ಶ್ರೀಧರ್ ಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಸಲಹೆ
ಅರಕಲಗೂಡು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಇದಕ್ಕಾಗಿ ಮತದಾರರು ತಮ್ಮ ಹೆಸರು ಮತಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು.
ಪಟ್ಟಣದ ಚಿಲುಮೆ ಮಠದ ಶಿವದೇವ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಬೂತ್‌ಮಟ್ಟದ ಏಜೆಂಟರ ಬಿ.ಎಲ್.ಎ-2 ಜಾಗೃತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಕೈಬಿಡದಂತೆ ಕಾರ್ಯಕರ್ತರು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದರು.
ಕಾಂಗ್ರೆಸ್‌ಮುಕ್ತ ಭಾರತ ಮಾಡುವ ದುರುದ್ದೇಶ ಹೊಂದಿರುವ ಬಿಜೆಪಿ ಆಸೆ ಈಡೇರಲ್ಲ. ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ಕಸಿಯುವ ಪ್ರಯತ್ನಗಳು ನಡೆಯುವ ಸಾಧ್ಯತೆ ಇದೆ ಎಂದು ಆರೋಪಿಸಿದ ಅವರು, ಈ ನಿಟ್ಟಿನಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಬಿ.ಎಲ್.ಎ-2ಗಳು ಪ್ರತಿ ಮನೆಗೂ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಜೀವನಮಟ್ಟ ಸುಧಾರಣೆಗೆ ನೆರವು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ನೆರವಾಗಿದ್ದು, ಈ ಯೋಜನೆಗಳ ಫಲಾನುಭವಿಗಳು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಂಘಟಿತವಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಸಭೆ ಉದ್ಘಾಟಿಸಿದ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸುವುದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಮತ ರಕ್ಷಣೆ ಮಾಡಿದರೆ ಮಾತ್ರ ಚುನಾವಣೆಯಲ್ಲಿ ಗೆಲುವು ಸುಲಭ. ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ, ಇಲ್ಲಿ 2028ಕ್ಕೆ ಪಕ್ಷ ಗೆಲ್ಲಲಿದ್ದು ಬದಲಾವಣೆ ಗಾಳಿ ಬೀಸುವುದು ಶತಃಸಿದ್ಧ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ.ಶ್ರೀಧರ್ ಗೌಡ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ತರವಾದ ಹಕ್ಕು, ರಾಜ್ಯದಲ್ಲಿ ಎಲ್ಲೋ ಒಂದು ಕಡೆ ಇದಕ್ಕೆ ಸಂಚಕಾರ ಬರುವ ಹುನ್ನಾರವಿದೆ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಎಲ್ಲ ದಾಖಲೆಗಳಿದ್ದರೂ ಲಕ್ಷಾಂತರ ಜನರ ಮತದಾನದ ಹಕ್ಕು ಕಸಿಯಲಾಯಿತು. ಮತ ಪರಿಷ್ಕರಣೆ ಹೆಸರಿನಲ್ಲಿ ಮೋಸ ಮಾಡುವ ಸಾಧ್ಯತೆ ಇದ್ದು ಇದನ್ನು ಮನಗಂಡು ಜಾಗೃತಿ ಮೂಡಿಸಲಾಗುತ್ತಿದೆ. ವಲಸೆ ಬಂದಿರುವವರನ್ನು ಮತ ಪಟ್ಟಿಗೆ ಸೇರಿಸಿದರೆ ಅವರು ಮತ್ತೆ ಅಲ್ಲಿಗೆ ಮರಳಿ ಮತ ಚಲಾಯಿಸುವುದು ತಪ್ಪಲಿದೆ. ಅನುಮಾನ ಇದ್ದವರ ಬಗ್ಗೆ ತಕರಾರು ಅರ್ಜಿ ಸಲ್ಲಿಸಬಹುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಕೆಪಿಸಿಸಿ ಸದಸ್ಯ ಹೊನ್ನಿಕೊಪ್ಪಲು ಮಂಜೇಗೌಡ, ತಾಲೂಕು ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಲಕ್ಷಣ್, ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಟಿ.ಸೋಮಶೇಖರ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎ.ವಿ. ಗುರುಮೂರ್ತಿ, ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಬಿ.ಎಲ್.ಎ-2ಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net