ಸಮಾಜ ಒಡೆಯುವ ಕೆಲಸಕ್ಕೆ ಕುಮ್ಮಕ್ಕು

ಅಜಯ್
ಅಜಯ್
Published on
ಅರಸೀಕೆರೆ: ಅಧಿಕಾರ ದೊರೆಯದೆ ಹತಾಶ ಮನೋಭಾವ ಹೊಂದಿರುವ ಕೆಲ ಕಾಂಗ್ರೆಸ್ ಮುಖಂಡರು ಹೊಟ್ಟೆ ಕಿಚ್ಚಿನ ರಾಜಕಾರಣ ಮಾಡಲು ಹೊರಟಿದ್ದು ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಹಾಗೂ ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಜಯ್ ಹೇಳಿದರು.
ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆ ವಿಷಯ ಮುಂದಿಟ್ಟು ಸಮಾಜ ಒಡೆಯುವ ಕೆಲಸಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದಾರೆ. ವಾಸ್ತವ ಅರಿಯದ ಕಾಂಗ್ರೆಸ್ ಮುಖಂಡ ಗಂಜಿಗೆರೆ ಚಂದ್ರಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಬಿ.ಶಶಿಧರ್ ಮೊದಲಾದವರನ್ನು ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಸ್ಥಳ ನಿಗದಿ, ಅನುಮತಿ ಪತ್ರ ಇಲ್ಲದೆ ಕಾಮಗಾರಿ ಮಾಡಲು ಸಾಧ್ಯವೇ ಎನ್ನುವ ಸಾಮಾನ್ಯ ತಿಳಿವಳಿಕೆ ಇಲ್ಲದಿರುವುದು ದುರದೃಷ್ಟಕರ. ಸತ್ಯಾಸತ್ಯತೆ ಅರಿಯದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 80 ಸಾವಿರ ಮತ ಪಡೆದ ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ವಿರುದ್ಧ ನಿರಾಧಾರ ಆರೋಪ ಮಾಡುತ್ತಿರುವುದು ಅಕ್ಷಮ್ಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಾಪ್ರಹಾರ ನಡೆಸಿದರು.
ಬೂತ್ ಮಟ್ಟದಲ್ಲಿ ಪಕ್ಷ ಬಲಗೊಳಿಸದೆ ಗಂಜಿ ಅಂಗಿ ಧರಿಸಿ ಫೋಸ್ ನೀಡುವ ಗಿರಾಕಿಗಳಿಗೆ ಯಾವುದೇ ಹುದ್ದೆ ನೀಡಲಾಗದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗಂಜಿಗೆರೆ ಚಂದ್ರಶೇಖರ್ ಈವರೆಗೂ ಒಂದೇ ಒಂದು ಚುನಾವಣೆ ಗೆದ್ದಿಲ್ಲ. ಕಡಿಮೆ ಮತ ಕೊಡಿಸಿದ್ದಕ್ಕೆ ಪಕ್ಷದ ಅಧ್ಯಕ್ಷ ಸ್ಥಾನ, ನಗರ ಯೋಜನಾ ಪ್ರಾಧಿಕಾರದ ಹುದ್ದೆ ನೀಡಿ ಬಡ್ತಿ ನೀಡಿದೆ. ಇನ್ನು ಕಾಂಗ್ರೆಸ್ ಟಿಟ್ ಬೇಡವೆಂದ ಜಿ.ಬಿ.ಶಶಿಧರ್ ಜಿಲ್ಲಾ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಹಿಂದುಳಿದ ವರ್ಗಗಳ ಮುಖಂಡರನ್ನು ಮುಗಿಸಿದ ಶಾಸಕರು ಬಸವಣ್ಣನ ಪುತ್ಥಳಿ ಹೆಸರಿನಲ್ಲಿ ಇದೀಗ ವೀರಶೈವ ಮುಖಂಡರನ್ನು ಓಲೈಸಲು ತಂತ್ರಗಾರಿಕೆ ರೂಪಿಸಿರುವುದು ಇವರಿಗೆ ಅರ್ಥವಾಗಿಲ್ಲ. ಅನ್ಯರಿಗೆ ಅಧಿಕಾರದ ಆಸೆ ತೋರಿಸಿ ಕೀಳು ಮಟ್ಟದ ರಾಜಕೀಯ ಮಾಡಲು ಮುಂದಾಗಿರುವುದು ನೀಚ ರಾಜಕಾರಣದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಭೋಜಾನಾಯ್ಕ ಮಾತನಾಡಿ, ದ್ವೇಷ ಭಾಷಣ ಮಾಡುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಸರ್ಕಾರ ಕಾಯ್ದೆ ತಂದಿದೆ. ಕ್ಷೇತ್ರದಲ್ಲಿ ಹೊಡಿ, ಬಡಿ ಸಂಸ್ಕೃತಿಗೆ ಬಹಿರಂಗ ಕರೆ ನೀಡಿರುವ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್ ಸೇರಿದಂತೆ ಹಲವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎನ್.ಆರ್.ಸಂತೋಷ್ ಅವರನ್ನು ಹೊಡೆದು ಕಳುಹಿಸುತ್ತೇವೆ ಎಂದು ಮಾತನಾಡಿರುವ ದಾಖಲೆಗಳು ಲಭ್ಯವಿದೆ ಎಂದರು.
ನಗರಸಭೆ ಮಾಜಿ ಸದಸ್ಯ ಭಾಸ್ಕರ್, ಮುಖಂಡರಾದ ಮಹಾಲಿಂಗಪ್ಪ, ಜಯರಾಂ, ಅರುಣ್ ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net