ಜ್ಞಾನದಿಂದ ಜಾಗತಿಕ ನಾಯಕರಾದ ಬಾಬಾ ಸಾಹೇಬ್

ಅರಕಲಗೂಡಿನಲ್ಲಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಶನಿವಾರ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬ ಕಾರ್ಯಕ್ರಮವನ್ನು  ಅಂಬೇಡ್ಕರ್ ಅವರ ಮೊಮ್ಮಗ ಆನಂದರಾಜ್ ಉದ್ಘಾಟಿಸಿದರು. ಕೆ.ಸಿ. ಸೌಮ್ಯಾ, ಗಣೇಶ್ ವೇಲಾಪುರಿ, ಲಿಂಗರಾಜು ಇತರರಿದ್ದರು.
ಅರಕಲಗೂಡಿನಲ್ಲಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಶನಿವಾರ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬ ಕಾರ್ಯಕ್ರಮವನ್ನು ಅಂಬೇಡ್ಕರ್ ಅವರ ಮೊಮ್ಮಗ ಆನಂದರಾಜ್ ಉದ್ಘಾಟಿಸಿದರು. ಕೆ.ಸಿ. ಸೌಮ್ಯಾ, ಗಣೇಶ್ ವೇಲಾಪುರಿ, ಲಿಂಗರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Babasaheb
ಅರಕಲಗೂಡು: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ತಳ ಸಮುದಾಯದಲ್ಲಿ ಜನಿಸಿದರೂ ತಮ್ಮ ಅಪ್ರತಿಮ ಜ್ಞಾನ ಮತ್ತು ಹೋರಾಟದ ಮೂಲಕ ಇಡೀ ಜಗತ್ತೇ ಮೆಚ್ಚುವಂತಹ ನಾಯಕರಾಗಿ ಬೆಳೆದ ಅವರು ಕೇವಲ ಒಂದು ಸಮುದಾಯ ಅಥವಾ ದೇಶಕ್ಕೆ ಸೀಮಿತವಾಗದೆ 21ನೇ ಶತಮಾನದ ಜಾಗತಿಕ ನಾಯಕರಾಗಿದ್ದಾರೆ ಎಂದು ಅಂಬೇಡ್ಕರ್ ಮೊಮ್ಮಗ ಆನಂದರಾಜ್ ಯಶ್ವಂತ್ ತಿಳಿಸಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಪ್ರಯುಕ್ತ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಶನಿವಾರ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಬಾ ಸಾಹೇಬರು ಕೇವಲ 65 ವರ್ಷಗಳ ತಮ್ಮ ಜೀವನದಲ್ಲಿ ಶ್ರೇಷ್ಠ ಅರ್ಥಶಾಸ್ತ್ರಜ್ಞ, ಪತ್ರಕರ್ತ, ಪ್ರಖ್ಯಾತ ವಕೀಲ ಹಾಗೂ ಸಂವಿಧಾನ ಶಿಲ್ಪಿಯಾಗಿ ದೇಶಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅಸ್ಪಶ್ಯತೆ ಮತ್ತು ಸಾಮಾಜಿಕ ಕಷ್ಟಗಳನ್ನು ಎದುರಿಸಿಯೂ ಅವರು ಜ್ಞಾನದ ಮೂಲಕ ಶತಮಾನಗಳ ಶೋಷಣೆಯನ್ನು ಕೊನೆಗಾಣಿಸಲು ಶ್ರಮಿಸಿದರು. ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಮುಕ್ತಿ ನೀಡುವ ಸಾಧನೆ ಎಂದು ಸಾರಿದ ಅವರು, ಇಡೀ ದೇಶವನ್ನು ಕಟ್ಟಿದ ನಿಜವಾದ ರಾಷ್ಟ್ರ ನಿರ್ಮಾಪಕ ಎಂದು ಬಣ್ಣಿಸಿದರು.
ಅಂಬೇಡ್ಕರ್ ಅವರ ಪ್ರಭಾವ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಸಂಕೇತವಾಗಿ ಜಪಾನ್ ವಿಶ್ವವಿದ್ಯಾಲಯದಲ್ಲಿ ಹಾಗೂ ಅಮೆರಿಕದಲ್ಲಿ ಅಂಬೇಡ್ಕರ್ ಅವರ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಿ ನೋಡುವುದು ಇತಿಹಾಸಕ್ಕೆ ಮಾಡುವ ಅಪಚಾರ ಎಂದು ತಿಳಿಸಿದರು.
ಅಂಬೇಡ್ಕರ್ ಸ್ಥಾಪಿಸಿದ ಪೀಪಲ್ಸ್ ಎಜುಕೇಷನ್ ಸೊಸೈಟಿ ಇಂದು ಬೆಂಗಳೂರು ಸೇರಿದಂತೆ ದೇಶದಾದ್ಯಂತ ಸಾವಿರಾರು ಬಡ ಹಾಗೂ ಶೋಷಿತ ವಿದ್ಯಾರ್ಥಿಗಳಿಗೆ ಜಾತಿ, ಧರ್ಮದ ಭೇದವಿಲ್ಲದೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಬಾಬಾ ಸಾಹೇಬರ ತತ್ವ ಸಿದ್ಧಾಂತಗಳನ್ನು ಮುಂದುವರಿಸಿಕೊಂಡು ಹೋಗುವುದು ಇಂದಿನ ಯುವ ಪೀಳಿಗೆಯ ಕರ್ತವ್ಯವಾಗಿದೆ. ಕಾರ್ಮಿಕರು ಮತ್ತು ಮಹಿಳೆಯರು ಇಂದು ಅನುಭವಿಸುತ್ತಿರುವ ಸೌಲಭ್ಯಗಳಿಗೆ ಬಾಬಾ ಸಾಹೇಬರ ದೂರದೃಷ್ಟಿಯೇ ಕಾರಣ. ಬುದ್ಧಿ ಮತ್ತು ಮನಸ್ಸಿನ ವಿಕಾಸವೇ ಮನುಷ್ಯನ ಅಂತಿಮ ಗುರಿಯಾಗಬೇಕು ಎಂಬ ಅಂಬೇಡ್ಕರ್ ಅವರ ಮಾತುಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಹೈಕೋರ್ಟ್ ವಕೀಲ ಮೋಹನ್ ಕುಮಾರ್ ಮಾತನಾಡಿ, ಶೋಷಿತ ಸಮುದಾಯದವರನ್ನು ಗುಲಾಮಗಿರಿಯ ಸಂಕೋಲೆಯಿಂದ ಬಿಡುಗಡೆಗೊಳಿಸಿ ಸ್ವತಂತ್ರ ಹಾಗೂ ಸ್ವಾಭಿಮಾನಿ ಪ್ರಜೆಗಳನ್ನಾಗಿ ಮಾಡುವ ಸಲುವಾಗಿಯೇ ನಾನು ಶಿಕ್ಷಣ ಪಡೆಯುತ್ತಿದ್ದೇನೆ. ಆ ಕಾರಣಕ್ಕಾಗಿ ನನ್ನ ಓದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಅಂಬೇಡ್ಕರ್ ಅಂದು ಪಣ ತೊಟ್ಟಿದ್ದರು. ಬಾಬಾಸಾಹೇಬರು ಉನ್ನತ ಶಿಕ್ಷಣವನ್ನು ಮುಗಿಸಿ ದೇಶಕ್ಕೆ ಮರಳಿದಾಗ ಅವರ ಮುಂದೆ ಅಪಾರವಾದ ಸವಾಲುಗಳಿದ್ದವು. ಅದರಲ್ಲಿ ಅಂದಿನ ಸ್ವಾತಂತ್ರ್ಯ ಹೋರಾಟಗಾರರೇ ಅವರಿಗೆ ಅತ್ಯಂತ ದೊಡ್ಡ ಸವಾಲಾಗಿದ್ದರು. ಕಾಂಗ್ರೆಸ್ ಕೇವಲ ದೇಶಕ್ಕೆ ರಾಜಕೀಯ ಸ್ವಾತಂತ್ರ್ಯವನ್ನು ಕೇಳುತ್ತಿದ್ದರೆ, ಬಾಬಾ ಸಾಹೇಬರು ತಮ್ಮ ಜನರ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿದ್ದರು. ನನ್ನ ಜನ ಸ್ವಂತ ಕಾಲಿನ ಮೇಲೆ ನಿಂತು ಬದುಕುವಂತಾಗಬೇಕು ಮತ್ತು ದೇಶದ ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದೇ ಅವರ ಆಶಯವಾಗಿತ್ತು ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಅಗಾಧವಾದ ವಿದ್ವತ್ತನ್ನು ಗಮನಿಸಿದ ಬ್ರಿಟಿಷರು, ಅವರನ್ನು ಬ್ರಿಟಿಷ್ ಕೌನ್ಸಿಲ್ ಸದಸ್ಯರನ್ನಾಗಿ ನೇಮಕ ಮಾಡಿದರು. ಕೌನ್ಸಿಲ್ ಸದಸ್ಯರಾಗಿ ಅವರು ನೀಡಿದ ಕೊಡುಗೆಗಳು ಅಪಾರ. ಅವರು ಮಂಡಿಸಿದ ಶಾಸನಗಳು, ತಂದ ಕಾಯ್ದೆಗಳು ಮತ್ತು ನೀಡಿದ ಭಾಷಣಗಳು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದ್ದು, ಅವರು ಅಂದು ರೂಪಿಸಿದ ಕಾನೂನುಗಳು ಇಂದಿಗೂ ದೇಶದಲ್ಲಿ ಜಾರಿಯಲ್ಲಿವೆ ಹಾಗೂ ಪ್ರಸ್ತುತವಾಗಿವೆ ಎಂದರು.
ವಕೀಲ ಬಿ.ಸಿ.ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ವಿಚಾರ ಧಾರೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಅಂಬೇಡ್ಕರ್ ಹಬ್ಬ ಹಮ್ಮಿಕೊಂಡಿರುವುದಾಗಿ ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬೀದರ್‌ನ ವರಜೋತಿ ಭಂತೇಜಿ ಪ್ರತಿಜ್ಞಾ ವಿಧಿ ಬೋಧಿಸಿದರು. ನಿವೃತ್ತ ಶಿಕ್ಷಕ ಹಾಗೂ ದಲಿತ ಮುಖಂಡ ಜವರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ತಹಸೀಲ್ದಾರ್ ಕೆ.ಸಿ.ಸೌಮ್ಯಾ, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಮುಖಂಡರಾದ ಗಣೇಶ್ ವೇಲಾಪುರಿ, ಎ.ವಿ.ಲಿಂಗರಾಜ್, ರಮೇಶ್ ಮರಿಲಕ್ಕಿ, ಚಂದ್ರಣ್ಣ, ನಟರಾಜ್, ಎಂ.ಕೆ. ದೇವರಾಜ್, ದುಮ್ಮಿ ಕೃಷ್ಣ, ಚಂದ್ರು ಉಪಸ್ಥಿತರಿದ್ದರು.
ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ, ಸಮಾನ ವೇತನ, ಕೆಲಸದ ಅವಧಿ ನಿಗದಿ ಮತ್ತು ಭವಿಷ್ಯ ನಿಧಿಯಂತಹ ಕ್ರಾಂತಿಕಾರಿ ಕಾನೂನುಗಳನ್ನು ತಂದವರು ಅಂಬೇಡ್ಕರ್. ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಆಸ್ತಿ ಹಕ್ಕು, ವಿಚ್ಛೇದನ ಮತ್ತು ಮದುವೆಯಲ್ಲಿ ಸಮಾನ ಹಕ್ಕುಗಳನ್ನು ಒದಗಿಸಲು ಅವರು ಮಾಡಿದ ಹೋರಾಟ ಅವಿಸ್ಮರಣೀಯ.
ಆನಂದರಾಜ್ ಯಶ್ವಂತ್, ಅಂಬೇಡ್ಕರ್ ಮೊಮ್ಮಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net