ಪಟ್ಟಣ ಸಮೀಪದ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಸಂಸತ್ ಚುನಾವಣೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೊಂದಿಗೆ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಇದ್ದರು.
ಪಟ್ಟಣ ಸಮೀಪದ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣ ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಶುಕ್ರವಾರ ಶಾಲಾ ಸಂಸತ್ ಚುನಾವಣೆ ನಡೆಯಿತು.
ಶಾಲಾ ವಿದ್ಯಾರ್ಥಿ ನಾಯಕ, ಉಪನಾಯಕ ಸೇರಿದಂತೆ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತಮ್ಮ ಸಹಪಾಠಿಗಳ ಬಳಿ ಮತಯಾಚನೆ ಮಾಡಿದರು. ನಂತರ ಚುನಾವಣೆ ನಿಯಮಾನುಸಾರ ಮತದಾನ ಪ್ರಕ್ರಿಯೆ ನಡೆಯಿತು. ವಿದ್ಯಾರ್ಥಿಗಳು ಸರತಿಯಲ್ಲಿ ನಿಂತು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸಿದರು.
ಒಟ್ಟು 312 ಮತಗಳು ಚಲಾವಣೆಯಾಗಿ, ಶೇ.100ರಷ್ಟು ಮತದಾನವಾಯಿತು. ಮತ ಎಣಿಕೆ ಬಳಿಕ ಎಚ್.ಎ.ಪುಣ್ಯಾ ನಾಯಕಿಯಾಗಿ, ಕೆ.ಎಂ.ತೇಜಸ್ವಿನಿ ಉಪನಾಯಕಿಯಾಗಿ ಆಯ್ಕೆಯಾದರು. ಜತೆಗೆ ಶಾಲಾ ಸಂಸತ್ ಸದಸ್ಯರಾಗಿ ಕೆ.ಎನ್.ತರುಣ್, ಎಂ.ಉಜ್ವಲ್, ಕೆ.ವಿ.ವರ್ಷಾ, ಎಚ್.ಜೆ.ಸೋಗ್ರಾ, ವೇದಾಂತ್, ಜಿ.ರಕ್ಷಾ, ಜಿ.ಡಿ.ನಚಿಕೇತ್, ಧ್ರುವಿತ್ ಆಯ್ಕೆಯಾದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಯ ರಾಜ್ಯಪಾಲ ರವಿಕುಮಾರ್ ಪ್ರಮಾಣ ವಚನ ಬೋಧಿಸಿದರು.
ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆ ಕಾರ್ಯದರ್ಶಿ ಎಚ್.ಎಂ.ದಿನೇಶ್ ಮಾತನಾಡಿ, ಶಾಲಾ ಸಂಸತ್ ಚುನಾವಣೆ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವ ಅರಿಯಲು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆ ಖಜಾಂಚಿ ಸಿ.ಎಚ್.ಲೋಕೇಶ್ ಮಾತನಾಡಿ, ಶಾಲಾ ಸಂಸತ್‌ನಿಂದ ಚುನಾವಣೆ ಅನುಭವ ದೊರೆಯುವುದು ವಿದ್ಯಾರ್ಥಿಗಳ ಭವಿಷ್ಯದ ನಾಯಕತ್ವಕ್ಕೆ ಭದ್ರ ಅಡಿಪಾಯವಾಗಲಿದೆ. ವಿಧಾನಸಭೆ ಚುನಾವಣೆಯ ಮಾದರಿಯಲ್ಲೇ ಇವಿಎಂ ಮೂಲಕ ಚುನಾವಣೆ ನಡೆಸಿರುವುದು ಶ್ಲಾಘನೀಯ. ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಶಿಕ್ಷಕರಾದ ಎಂ.ಎನ್.ದೀಪಾ, ಮಮತಾಶ್ರೀ, ಎಚ್.ಎಂ.ಪ್ರೀತಿ, ಅಸ್ಮಾ, ಕಾವ್ಯಾ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.