ನ್ಯಾನೋ ರೂಪದ ರಸಗೊಬ್ಬರ ಬಳಸಿ ಕ್ರಿಮಿನಾಶಕಗಳನ್ನು ತಡೆಯಿರಿ

ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಡ್ರೋನ್ ಮೂಲಕ ಬೆಳೆಗಳಿಗೆ ಕೀಟನಾಶಕ, ಸೂಕ್ಷ್ಮ ಪೋಷಕಾಂಶಗಳ ಸಿಂಪಡಣೆ ಕುರಿತ ಪ್ರಾತ್ಯಕ್ಷಿಕೆ ಕಾರ್ಯಗಾರದಲ್ಲಿ ಅಧಿಕಾರಿಗಳು ಮತ್ತು ರೈತರು ಭಾಗವಹಿಸಿದ್ದರು.
ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಡ್ರೋನ್ ಮೂಲಕ ಬೆಳೆಗಳಿಗೆ ಕೀಟನಾಶಕ, ಸೂಕ್ಷ್ಮ ಪೋಷಕಾಂಶಗಳ ಸಿಂಪಡಣೆ ಕುರಿತ ಪ್ರಾತ್ಯಕ್ಷಿಕೆ ಕಾರ್ಯಗಾರದಲ್ಲಿ ಅಧಿಕಾರಿಗಳು ಮತ್ತು ರೈತರು ಭಾಗವಹಿಸಿದ್ದರು.
Published on
ಬೇಲೂರು: ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಗೆ ಉತ್ತೇಜನ ನೀಡುವುದಕ್ಕಾಗಿ ಕೃಷಿ ಇಲಾಖೆಯಿಂದ ಡ್ರೋನ್ ಮೂಲಕ ಬೆಳೆಗಳಿಗೆ ಕೀಟನಾಶಕ, ಶಿಲೀಂಧ್ರನಾಶಕ ಹಾಗೂ ಸೂಕ್ಷ್ಮ ಪೋಷಕಾಂಶಗಳ ಸಿಂಪಡಣೆ ಕುರಿತು ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಕಾರ್ಯಗಾರದಲ್ಲಿ ರೈತರು ಡ್ರೋನ್ ತಂತ್ರಜ್ಞಾನದ ಕಾರ್ಯವೈಖರಿ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಕಲೇಶಪುರ ತಾಲೂಕಿನ ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಪ್ರಭಾಕರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸಗೊಬ್ಬರದ ಬಳಕೆ ಹೆಚ್ಚಾದ ಕಾರಣ, ಬೆಳೆ ಹಾಗೂ ಪರಿಸರದ ಮೇಲೆ ಅಡ್ಡ ಪರಿಣಾಮಗಳುಂಟಾಗುತ್ತಿವೆ. ಪ್ರಸಕ್ತ ದಿನಗಳಲ್ಲಿ ನ್ಯಾನೋ ತಂತ್ರಜ್ಞಾನ ದೇಶ ಮತ್ತು ರಾಜ್ಯದಲ್ಲಿ ಅತ್ಯಂತ ಪ್ರಚಲಿತದಲ್ಲಿದೆ. ಸರ್ಕಾರ ರಸಗೊಬ್ಬರಗಳಿಗೆ ನೀಡುವ ಸಹಾಯಧನ ಹೊರೆಯಾಗುತ್ತಿದೆ. ಸಮತೋಲನ ರಸಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕಾಪಾಡಬೇಕು. ಸರ್ಕಾರ ಇಂತಹ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ.
ರೈತರು ನ್ಯಾನೋ ರೂಪದ ರಸಗೊಬ್ಬರಗಳ ಬಳಕೆ ಮಾಡಿ, ಬೆಳೆಯಲ್ಲಿ ಗುಣಮಟ್ಟ ಮತ್ತು ಕ್ರಿಮಿಕೀಟಗಳನ್ನು ತಡೆಯಬಹುದು ಎಂದರು.
ಬೇಲೂರಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡ್ರೋನ್ ತಂತ್ರಜ್ಞಾನ ರೈತರಿಗೆ ಅನುಕೂಲಕರವಾಗಿದೆ. ಡ್ರೋನ್ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚಿನ ಜಮೀನಿಗೆ ಸಮರ್ಪಕವಾಗಿ ಔಷಧ ಸಿಂಪಡಣೆ ಮಾಡಬಹುದು. ಇದರಿಂದ ಸಮಯ, ಕಾರ್ಮಿಕರ ವೆಚ್ಚ ಹಾಗೂ ಔಷಧದ ಪ್ರಮಾಣದಲ್ಲಿ ಉಳಿತಾಯ ಮಾಡುವುದರ ಜತೆಗೆ ಬೆಳೆಗಳಿಗೆ ಸಮಾನ ಪ್ರಮಾಣದಲ್ಲಿ ಔಷಧ ಸಿಂಪಡಣೆ ಸಾಧ್ಯವಾಗುತ್ತದೆ ಎಂದರು.
ನಮ್ಮ ಗ್ರೋಮೋರ್ ಸೆಂಟರ್ ವ್ಯವಸ್ಥಾಪಕ ಚಂದ್ರಶೇಖರ ಮಾತನಾಡಿ, ಪ್ರಾತ್ಯಕ್ಷಿಕೆ ವೇಳೆ ಡ್ರೋನ್ ಹಾರಾಟ, ಔಷಧ ಮಿಶ್ರಣದ ಪ್ರಮಾಣ, ಸುರಕ್ಷತಾ ಕ್ರಮಗಳು, ಗಾಳಿಯ ವೇಗ ಹಾಗೂ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಸಿಂಪಡಣೆ ಮಾಡುವ ವಿಧಾನಗಳ ಕುರಿತು ರೈತರು ಹೆಚ್ಚು ಗಮನ ಹರಿಸಬೇಕು. ಕಾಳು ಗೊಬ್ಬರದಿಂದ ನ್ಯಾನೋ ಗೊಬ್ಬರಕ್ಕೆ ರೈತರು ಮುಂದಾಗಿ, ಯೂರಿಯಾ ಬಳಕೆ ಕಡಿಮೆಯ ಜತೆಗೆ ಡ್ರೋನ್ ಬಳಕೆಯಿಂದ ನೀರಿನ ಬಳಕೆ ಸಹ ಕಮ್ಮಿಯಾಗುವುದರಿಂದ ಔಷಧ ವ್ಯರ್ಥವಾಗುವುದನ್ನು ತಡೆದು, ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ ದೊರೆಯುತ್ತದೆ. ಆದ್ದರಿಂದ ರೈತರು. ಹೊಸ ತಂತ್ರಜ್ಞಾನ ಅಳವಡಿಸಿಕೊಂಡರೆ ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸಿ, ವೆಚ್ಚವನ್ನು ಕಡಿಮೆ ಮಾಡಬಹುದು ಎಂದರು.
ಕೃಷಿ ಸಮಾಜದ ರಾಜ್ಯ ಪ್ರತಿನಿಧಿ ಬಿ.ಎಂ.ದೊಡ್ಡವೀರೇಗೌಡ, ಹಳೇಬೀಡು ಕೃಷಿ ಅಧಿಕಾರಿ ಹೇಮಾಂತ, ಗ್ರೋಮಾರ್ ಸಂಸ್ಥೆ ವಿಷ್ಣು, ಮಹಿಳಾ ಸಂಘದ ಅಧ್ಯಕ್ಷೆ ರತಿದೇವಿ, ಕೃಷಿ ಇಲಾಖೆ ಲತಾ, ರೈತ ಮುಖಂಡರಾದ ಮೋಹನ್, ರಾಜಶೇಖರ, ಜಗದೀಶ್, ಬಸವೇಗೌಡ, ಸುಂದರ್ ಸೇರಿದಂತೆ ರೈತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net