ಎಟಿಂಎ ಯಂತ್ರದಲ್ಲಿ ಹಣ ಕಳವಿಗೆ ಯತ್ನ ವಿಫಲ

ಟಿಎಂ ಯಂತ್ರ ಹಾನಿಯಾಗಿರುವುದು.
ಟಿಎಂ ಯಂತ್ರ ಹಾನಿಯಾಗಿರುವುದು.
Published on
ಅರಸೀಕೆರೆ: ನಗರದ ವಾಚನಾಲಯ ರಸ್ತೆ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನಕ್ಕೆ ಹೊಂದಿಕೊಂಡಂತಿರುವ ವಾಣಿಜ್ಯ ಸಂಕೀರ್ಣದಲ್ಲಿನ ಕರ್ನಾಟಕ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿ ವಿಫಲರಾಗಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ನಗರ ನಿವಾಸಿ ಸುಹೇಲ್ (23) ಬಂಧಿತ. ವಿಚಾರಣೆ ವೇಳೆ ಈತ ನೀಡಿದ ಮೇರೆಗೆ ಹಾಸನ ನಗರ ನಿವಾಸಿಯೇ ಆದ ಅವೇಜ್ ಖಾನ್ (23)ನನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಎಟಿಎಂಗೆ ನುಗ್ಗಿರುವ ಬಂಧಿತರಿಬ್ಬರು ಸಿಸಿ ಕ್ಯಾಮರಾ ಧ್ವಂಸಗೊಳಿಸಿ ಎಟಿಎಂ ಯಂತ್ರ ಹಾನಿ ಮಾಡಿ ಹಣ ಕದಿಯಲು ಯತ್ನಿಸಿದ್ದಾರೆ. ಅದು ಸಾಧ್ಯವಾಗದೆ ಸ್ಥಳದಿಂದ ಪರಾರಿಯಾಗಿದ್ದರು. ಹಣ ಕಳವಿಗೆ ಯತ್ನಿಸಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಎಟಿಎಂ ರಿಮೋಟ್ ಮಾನಿಟರಿಂಗ್ ವ್ಯವಸ್ಥೆ ಹೊಂದಿದ್ದರಿಂದ ಹಣ ಕಳವು ಯತ್ನವನ್ನು ಕ್ಯಾಮರಾದಲ್ಲಿ ಗಮನಿಸಿದ ಗುತ್ತಿಗೆ ಪಡೆದಿರುವ ಕಂಪನಿ ಎನ್‌ಸಿಆರ್ ಕಾರ್ಪೋರೇಷನ್ ಇಂಡಿಯಾದ ಸಿಬ್ಬಂದಿ ಹೈದರಾಬಾದ್ ಕೇಂದ್ರಕ್ಕೆ ಸಂದೇಶ ರವಾನಿಸಿದ್ದರು. ಕೂಡಲೇ ಕಂಪನಿ ಪ್ರತಿನಿಧಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಸುಹೇಲ್‌ನನ್ನು ಬಂಧಿಸಿದ್ದರು. ಆತ ನೀಡಿದ ಮಾಹಿತಿ ಮೇರೆಗೆ ಅವೇಜ್ ಖಾನ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಿಎಸ್‌ಐ ದಿಲೀಪ್‌ಕುಮಾರ್. ಶಿವಾನಂದ, ಎಎಸ್‌ಐ ಶಿವಲಿಂಗಪ್ಪ ಮೋಹನ್ ನಾಯಕ್, ಪ್ರವೀಣ್, ಶಿವಶಂಕರ್, ಎ.ಎಚ್.ದೀಪಕ್, ಸಿದ್ದೇಶ್, ಸಂಜೀವ, ಪುಟ್ಟಸ್ವಾಮಿ, ಕಾರ್ತಿಕ್, ಬೇಬಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net