ಬಾಣಾವರ ಪಿಡಿಒ ಕುಮಾರಸ್ವಾಮಿ ಮತ್ತು ಆತನ ಸಹೋದರ ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರ
ಅರಸೀಕೆರೆ ಗ್ರಾಮಾಂತರ: ತಮ್ಮ ವಿರುದ್ಧ ಸರ್ಕಾರಿ ಜಾಗ ಒತ್ತುವರಿ ಆರೋಪ ಮಾಡಿದರೆಂಬ ಕಾರಣಕ್ಕೆ ಬಾಣಾವರ ಪಿಡಿಒ ಕುಮಾರಸ್ವಾಮಿ ಮತ್ತು ಆತನ ಸಹೋದರ ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರ ದೂರುದಾರ ಗಿರೀಶ್ ಕುಟುಂಬದ ಮೇಲೆ ಹಲ್ಲೆ ಮಾಡಿರುವ ಕುರಿತು ಜಾವಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಲಿಂಗ್ಲಾಪುರ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ನೀಲಿಗಿರಿ ಕಾವಲ್ ಗ್ರಾಮದ ಸರ್ವೇ ನಂ.682ರಲ್ಲಿರುವ 3.20 ಎಕರೆ ಕೆರೆ ಪ್ರದೇಶವಾಗಿದ್ದು, 2 ಎಕರೆ ಜಾಗವನ್ನು ಪಿಡಿಒ ಕುಮಾರಸ್ವಾಮಿ ತಮ್ಮ ಪ್ರಭಾವ ಬಳಸಿಕೊಂಡು ಸರ್ಕಾರಿ ಜಾಗದಲ್ಲೇ ಕೃಷಿ ಹೊಂಡ ನಿರ್ಮಿಸಿದ್ದಾರೆ. ಅಲ್ಲದೆ ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರದಿಂದಲೇ ಪಿಡಿಒ ಹಣ ಮಂಜೂರು ಮಾಡಿಸಿಕೊಂಡಿದ್ದಾರೆಂದು ದೂರುದಾರ ಗಿರೀಶ್ ಆರೋಪಿಸಿದ್ದರು.
ಈ ಸಂಬಂಧ ತಾಪಂ ಇಒ, ತಹಸೀಲ್ದಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಗಿರೀಶ್ ಇತ್ತೀಚೆಗೆ ದೂರು ಸಲ್ಲಿಸಿದ್ದರು. ಮಂಗಳವಾರ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ ವೇಳೆ ಒತ್ತುವರಿ ಕಂಡು ಬಂದ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಮಾಡುವಂತೆ ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರ ಅವರಿಗೆ ಸೂಚಿಸಿ ಅಧಿಕಾರಿಗಳು ತೆರಳಿದ್ದರು.
ಇದರಿಂದ ಕೋಪಗೊಂಡ ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರ, ದೂರುದಾರ ಕುಟುಂಬದ ಮೇಲೆ ಮಚ್ಚು, ದೊಣ್ಣೆ, ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಮೂರ್ತಿ, ಪಾಪಣ್ಣ, ರೇವಣ್ಣ ಅವರಿಗೆ ಗಂಭೀರ ಗಾಯಗಳಾಗಿದ್ದು, ಹಾಸನದ ಹಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.