ಹಳೇಬೀಡು: ಸಸ್ಯಗಳ ಬೆಳವಣಿಗೆ ಹಾಗೂ ರಚನೆಯು ಅದು ತನ್ನಲ್ಲೇ ಉತ್ಪಾದಿಸಿಕೊಳ್ಳುವ ಪೋಷಕಾಂಶಗಳಿಂದ ಆಗುತ್ತದೆ. ಪತ್ರಹರಿತ್ತು ಮತ್ತು ದ್ಯುತಿಸಂಶ್ಲೇಷಣ ಕ್ರಿಯೆ ಸಸ್ಯಗಳ ಅಭಿವೃದ್ಧಿಗೆ ಕಾರಣವಾಗುತ್ತದೆ. ಪ್ರಕೃತಿ ಮಳೆ ಸುರಿಸುತ್ತದೆ, ಗಿಡಗಳು ಬೆಳೆಯುತ್ತವೆ. ಇದರಲ್ಲಿ ಮನುಷ್ಯನ ಪಾತ್ರ ಅಥವಾ ಶಕ್ತಿ ಪ್ರಯೋಗ ಎಳ್ಳಷ್ಟೂ ಇಲ್ಲ. ಆದ್ದರಿಂದ, ಮಾನವರು ಕೃಷಿ ಪದ್ಧತಿಯನ್ನು ವ್ಯಾಪಾರಿ ಮನೋಭಾವದಿಂದ ಪರಿಗಣಿಸುವುದನ್ನು ಬಿಡಬೇಕು ಎಂದು ಡಾ.ಸುಭಾಷ್ ಪಾಳೇಕರ್ ಹೇಳಿದರು.
ಸಮೀಪದ ಪುಷ್ಪಗಿರಿ ಶ್ರೀಮಠದ ಆವರಣದಲ್ಲಿ ಮಂಗಳವಾರ ನಡೆದ ನೈಸರ್ಗಿಕ ಕೃಷಿ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮನುಷ್ಯನಿಂದ ಸಸ್ಯಲೋಕಕ್ಕೆ ಯಾವ ಪ್ರಯೋಜನವೂ ಇಲ್ಲ. ಸಸ್ಯಗಳು ಮನುಷ್ಯರಿಂದ ಮತ್ತು ಇನ್ನಿತರ ಮೂಲಗಳಿಂದ ಬಿಡುಗಡೆಯಾಗುವ ಇಂಗಾಲವನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತಿವೆ. ಅದರಿಂದ ನಾವು ಉಸಿರಾಡುತ್ತಿದ್ದೇವೆ. ಹಾಗಾಗಿ, ನಿಸರ್ಗದತ್ತವಾದ ನಿಯಮಗಳ ಅನುಸಾರ ಬೆಳೆಯುವ ಗಿಡ-ಮರಗಳನ್ನು ನಾವು ಕೃತಕವಾಗಿ ಪೋಷಿಸಿ ಅಭಿವೃದ್ಧಿಪಡಿಸಿದರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ಸಾವಯವ ಕೃಷಿ ಎಂಬ ಹೆಸರಿನಲ್ಲಿ ಇತ್ತೀಚೆಗೆ ದೊಡ್ಡ ದಂಧೆಯೇ ಆರಂಭವಾಗಿದೆ. ನೈಸರ್ಗಿಕ ಪದ್ಧತಿಯಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ಮನುಷ್ಯನಿಗಷ್ಟೇ ಅಲ್ಲದೆ, ಪ್ರಾಣಿ-ಪಕ್ಷಿಗಳ ಇರುವಿಕೆಗೂ ಅನುಕೂಲವಾಗುತ್ತದೆ. ಮೂರು ದಿನಗಳ ಕಾಲ ನಡೆದ ಕಾರ್ಯಾಗಾರವು ನಿಜವಾದ ರೀತಿಯಲ್ಲಿ ಯಶಸ್ವಿಯಾಗುವುದು ಇಲ್ಲಿ ಭಾಗವಹಿಸಿದ ರೈತರೆಲ್ಲರೂ, ಈ ಪದ್ಧತಿಯನ್ನು ಅಳವಡಿಸಿಕೊಂಡು ವ್ಯವಸಾಯ ಮಾಡಿದರೆ ಮಾತ್ರ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪುಷ್ಪಗಿರಿ ಮಠದ ಶ್ರೀಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಹಾರವನ್ನು ಸೇವಿಸದೆ ಯಾರೂ ಬದುಕಿರಲು ಸಾಧ್ಯವಿಲ್ಲ. ಅಂತಹ ಆಹಾರವು ಜೀವಕ್ಕೆ ಇಂಬುಕೊಡುವ ಬದಲು ವಿಷಯುಕ್ತವಾಗಿ ಪರಿಣಮಿಸುತ್ತಿರುವುದು ದುರ್ದೈವ. ಅಂತಿಮವಾಗಿ ಭವಿಷ್ಯದ ಅನಾಹುತಕ್ಕೆ ರೈತರೇ ಪರೋಕ್ಷವಾಗಿ ಕಾರಣರಾಗುತ್ತಾರೆ. ಬಹುರಾಷ್ಟ್ರಿಯ ಕಂಪನಿಗಳ ಪ್ರಚೋದನೆಗೆ ಮರುಳಾಗದೆ ಮಣ್ಣಿನ ಸತ್ವವನ್ನು ಉಳಿಸಿಕೊಂಡು ಪಾಳೇಕರ್ ಪದ್ಧತಿಯಲ್ಲಿ ವ್ಯವಸಾಯ ಮಾಡುವುದನ್ನು ಎಲ್ಲ ರೈತರೂ ಅಳವಡಿಸಿಕೊಳ್ಳಬೇಕು. ಮೂರು ದಿನಗಳ ಆರೋಗ್ಯಕರ ಕಾರ್ಯಾಗಾರವು ನಮ್ಮ ಮನಸ್ಸಿಗೆ ತುಂಬ ನೆಮ್ಮದಿ ತಂದುಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಕಣಗಾಲ್ ಮೂರ್ತಿ, ಕೆ.ಟಿ.ಗಂಗಾಧರ, ಟಿ.ಬಿ.ಹಾಲಪ್ಪ, ಗುರುಸ್ವಾಮಿಗೌಡ, ಎಲ್.ಈ. ಶಿವಪ್ಪ ಮತ್ತಿತರರು ಕಾರ್ಯಾಗಾರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ನಂತರ ರೈತರೊಂದಿಗೆ ಸಂವಾದ ನಡೆಸಲಾಯಿತು.