ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಮತ್ತೊಮ್ಮೆ ಭೂಮಿಪೂಜೆ

ಎತ್ತಿನಹೊಳೆ ದ್ವಿತೀಯ ಹಂತದ ಕಾಮಗಾರಿಗೆ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಶಾಸಕ ಶಿವಲಿಂಗೇಗೌಡ, ಶಶಿಧರ್, ಶಿವಶಂಕರ್, ಅಡವಿ ಸ್ವಾಮಿ, ಬಿಳಿ ಚೌಡಯ್ಯ, ಆನಂದ್, ದೇವರಾಜ್ ಇತರರಿದ್ದರು.
ಎತ್ತಿನಹೊಳೆ ದ್ವಿತೀಯ ಹಂತದ ಕಾಮಗಾರಿಗೆ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಶಾಸಕ ಶಿವಲಿಂಗೇಗೌಡ, ಶಶಿಧರ್, ಶಿವಶಂಕರ್, ಅಡವಿ ಸ್ವಾಮಿ, ಬಿಳಿ ಚೌಡಯ್ಯ, ಆನಂದ್, ದೇವರಾಜ್ ಇತರರಿದ್ದರು.
Published on
ಅರಸೀಕೆರೆ ಗ್ರಾಮಾಂತರ: ಅರಸೀಕೆರೆ ತಾಲೂಕಿನ ಬರ ನೀಗಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗೆ ಇದ್ದ ಸಣ್ಣ ಪುಟ್ಟ ಅಡ್ಡಿ ನಿವಾರಣೆಯಾಗಿದ್ದು, ನೇತ್ರಾವತಿ ಕೊಳ್ಳದ ನೀರು ತಾಲೂಕಿನ ಕೆರೆ ಕಟ್ಟೆಗಳು ತುಂಬುವ ಹಾದಿ ಸುಗಮವಾಗಿದೆ. ಇದು ತಾಲೂಕಿನ ಜನತೆಯ ಸಂತಸಕ್ಕೆ ಕಾರಣವಾಗಿದೆ.
ಅರಣ್ಯ ಇಲಾಖೆಗೆ ಸೇರಿದ ಐದಳ್ಳ ಕಾವಲು ಮೂಲಕ ಹಾದು ಬರಬೇಕಿದ್ದ ಕಾಮಗಾರಿಗೆ ಕಾನೂನಾತ್ಮಕ ಅಡ್ಡಿ ಎದುರಾಗಿತ್ತು. ಶಾಸಕ ಕೆ.ಎಂ ಶಿವಲಿಂಗೇಗೌಡರ ಹೋರಾಟ ಫಲದಿಂದ ರಾಜ್ಯ ಸರ್ಕಾರ *ಕೇಂದ್ರ ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿ ಕೊನೆಗೂ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರಿಂದ ಮಧ್ಯ ಕರ್ನಾಟಕದ ಹತ್ತಾರು ಜಿಲ್ಲೆಗಳ ಜನತೆಯ ದಾಹ ನಿಗಿಸುವ ಮಹತ್ವಕಾಂಕ್ಷಿ ಯೋಜನೆ ಎತ್ತಿನಹೊಳೆ ಕಾಮಗಾರಿಗೆ ಮತ್ತೊಮ್ಮೆ ಹಸಿರು ನಿಶಾನೆ ಸಿಕ್ಕಿದೆ.
*ಕೇಂದ್ರ ಅರಣ್ಯ ಇಲಾಖೆಯ ಅನುಮತಿ ದೊರೆಯುತ್ತಿದ್ದಂತೆ ಚುರುಕಾದ ಶಾಸಕ ಶಿವಲಿಂಗೇಗೌಡ ಅವರು ತಾಲೂಕಿನ ನಾಗೇನಹಳ್ಳಿ ಸಮೀಪವಿರುವ ರಂಗನಾಥಸ್ವಾಮಿ ದೇವಾಲಯದ ಸಮೀಪ ಸ್ಥಗಿತಗೊಂಡಿದ್ದ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಸೋಮವಾರ ಮತ್ತೊಮ್ಮೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ನಂತರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಮಧ್ಯ ಕರ್ನಾಟಕದ ಹತ್ತಾರು ಜಿಲ್ಲೆಯ ಜನತೆಯ ದಾಹ ನಿಗಿಸಲು ಎತ್ತಿನಹೊಳೆ ಯೋಜನೆ ಸಂಜೀವಿನಿಯಾಗಿದೆ. ಕಾಮಗಾರಿಗೆ ಎದುರಾದ ಅಡ್ಡಿ, ಆತಂಕಗಳೆಲ್ಲ ನಿವಾರಣೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ತಾಲೂಕಿನ ಕೆರೆ ಕಟ್ಟೆಗಳಲ್ಲಿ ನೇತ್ರಾವತಿ ಕೊಳ್ಳದ ನೀರು ತುಂಬಲಿದೆ ಎಂದು ಸಂತಸ ಹಂಚಿಕೊಂಡರು.
ಹಾರನಹಳ್ಳಿ ಕೋಡಿಮಠದ ಶ್ರೀಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಹೆಳವನ ಮನೆ ಬಾಗಿಲಿಗೆ ಹೊಳೆ ಬಂತು ಎಂಬಂತೆ ಬಯಲು ಸೀಮೆ ಅರಸೀಕೆರೆ ತಾಲೂಕಿಗೆ ಎತ್ತಿನಹೊಳೆ ಯೋಜನೆ ವರದಾನವಾಗಿದೆ. ಇದು ಶಿವಲಿಂಗೇಗೌಡರ ಅವಿರತ ಹೋರಾಟದ ಫಲ. ಶಿವಲಿಂಗೇಗೌಡರ ಹೆಸರು, ಅರಸೀಕೆರೆ ತಾಲೂಕಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಎರಡು ನದಿ ಹರಿದರೂ ನೀರಾವರಿ ಸೌಲಭ್ಯ ವಂಚಿತವಾಗಿದ್ದ ತಾಲೂಕಿನ ಜನತೆ ಕೃಷಿಗೆ ಇರಲಿ, ಕುಡಿಯುವ ನೀರಿಗೂ ಹಾಹಾಕಾರಪಡುವ ಪರಿಸ್ಥಿತಿ ಇತ್ತು. ಆದರೀಗ ಶಿವಲಿಂಗೇಗೌಡ ಅವರು ಕುಡಿಯುವ ನೀರಿನ ಸಮಸ್ಯೆ ಮುಂದಿನ 50 ವರ್ಷ ತಾಲೂಕಿನ ಜನರನ್ನು ಕಾಡದಂತೆ ಶಾಶ್ವತ ಪರಿಹಾರ ಕಂಡುಹಿಡಿದಿದ್ದಾರೆ. ನೀರು ತರಲು ಸದನದಲ್ಲಿ ಕಣ್ಣೀರು ಹಾಕಿದ್ದರು. ಅವರ ಕಣ್ಣೀರಿನ ಫಲವಾಗಿ ಬಯಲುಸೀಮೆಯಲ್ಲಿ ನೀರು ಹರಿಯಲು ಕಾರಣವಾಗಿದ್ದು, ಶಿವಲಿಂಗೇಗೌಡ ಬರದ ನಾಡಿನ ಭಗೀರಥ ಎಂದು ಶ್ಲಾಘಿಸಿದರು.
ಕೆಪಿಸಿಸಿ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶಶಿಧರ್, ಕಾಂಗ್ರೆಸ್ ಮುಖಂಡರಾದ ಅಡವಿಸ್ವಾಮಿ, ಶಿವಶಂಕರ್, ಜಿಪಂ ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ, ಮಾಜಿ ಸದಸ್ಯ ಸ್ವಾಮಿ, ಎತ್ತಿನಹೊಳೆ ಎಇಇ ಆನಂದ್, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net