ಭಕ್ತರ ಸಂಕಷ್ಟ ಪರಿಹರಿಸುವ ತಿಮ್ಮಪ್ಪ

ಅರಸೀಕೆರೆ ಸಮೀಪ ಇರುವ ಓರಗಲ್ ಶ್ರೀ ತಿಮ್ಮಪ್ಪ ದೇವಾಲಯದ ಹೊರ ನೋಟ
ಅರಸೀಕೆರೆ ಸಮೀಪ ಇರುವ ಓರಗಲ್ ಶ್ರೀ ತಿಮ್ಮಪ್ಪ ದೇವಾಲಯದ ಹೊರ ನೋಟ
Published on
ಕಣಕಟ್ಟೆ ಕುಮಾರ್ ಅರಸೀಕೆರೆ ಗ್ರಾಮಾಂತರ
ಸಿದ್ದರ ನಾಡು, ಕಲ್ಪತರು ಬೀಡು ಎಂದೇ ಹೆಸರಾದ ಅರಸೀಕೆರೆ ತಾಲೂಕು ತನ್ನ ವ್ಯಾಪ್ತಿಯಲ್ಲಿ ಹಲವು ದೇವಾಲಯಗಳನ್ನು ಹಾಗೂ ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ. ಅರಸೀಕೆರೆ ನಗರದಿಂದ 8 ಕಿಲೋಮೀಟರ್ ದೂರದಲ್ಲಿರುವ ಸುಕ್ಷೇತ್ರ ಓರಗಲ್ ಗುಡ್ಡದ ಮೇಲೆ ಪೂರ್ವ ದಿಕ್ಕಿಗೆ ಅಭಿಮುಖವಾಗಿ ನೆಲಸಿರುವ ತಿಮ್ಮಪ್ಪ ದೇವರು ನಂಬಿ ಬರುವ ಭಕ್ತರ ಮನದ ಇಷ್ಟಾರ್ಥವನ್ನು ಈಡೇರಿಸುತ್ತಿರುವ ದೈವವಾಗಿರುವುದು ವಿಶೇಷ. ಅಲಂಕಾರ ಪ್ರಿಯನಾದ ತಿಮ್ಮಪ್ಪ ಸ್ವಾಮಿಯನ್ನು ದರ್ಶನ ಮಾಡುವುದೇ ಜನ್ಮ ಜನ್ಮದ ಪುಣ್ಯ ಎಂದು ನಂಬಲಾಗಿದೆ. ಈ ಸನ್ನಿಧಿಗೆ ಬಂದು ದೇವರನ್ನು ಕಂಡರೆ ಅನೇಕ ಜನ್ಮಗಳ ಪಾಪ ಪರಿಹಾರವಾಗುತ್ತದೆ ಮತ್ತು ಮೋಕ್ಷ ಲಭಿಸುತ್ತದೆ ಎಂದು ಭಕ್ತರು ಅಚಲವಾಗಿ ನಂಬಿದ್ದಾರೆ. ಪ್ರತಿ ಶನಿವಾರ ಸೇರಿದಂತೆ ವೈಕುಂಠ ಏಕಾದಶಿ, ಪ್ರತಿ ತಿಂಗಳ ಹುಣ್ಣಿಮೆ ದಿನಗಳಂದು ಸೇರಿದಂತೆ ಹಬ್ಬ, ಹರಿದಿನಗಳಲ್ಲಿ ಅಲಂಕಾರ ಪ್ರಿಯನಾದ ತಿಮ್ಮಪ್ಪನನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ತಾಲೂಕಿನಿಂದ ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದಲೂ ಭಕ್ತರ ದಂಡೇ ಈ ಬೆಟ್ಟಕ್ಕೆ ಹರಿದು ಬರುವುದು ಗಮನೀಯ ಸಂಗತಿಯಾಗಿದೆ.
*
800 ವರ್ಷಗಳ ಇತಿಹಾಸವಿರುವ ಕ್ಷೇತ್ರ
ಸುಮಾರು 800 ವರ್ಷಗಳ ಹಿಂದೆ ಓರಗಲ್ ಪಟ್ಟಣವೆಂದೇ ಖ್ಯಾತಿಯಾಗಿದ್ದ ಈ ಪ್ರಾಂತ್ಯವನ್ನು ಪಾಳೇಗಾರರು ಆಳ್ವಿಕೆ ಮಾಡುತ್ತಿದ್ದರು. ಅವರ ಆರಾಧ್ಯ ದೈವ ತಿರುಪತಿ ತಿಮ್ಮಪ್ಪ ದೇವರು. ಆತನನ್ನು ಆಗಾಗ್ಗೆ ದರ್ಶನ ಮಾಡಲು ಮತ್ತು ಪ್ರಾಂತ್ಯದ ಭಕ್ತರ ಕ್ಷೇತ್ರವನ್ನಾಗಿ ರೂಪಿಸಲು ಅವರು ದೇವಾಲಯ ನಿರ್ಮಾಣ ಮಾಡಿದರು. ಅಂದಿನಿಂದಲೂ ಇಲ್ಲಿ ದೇವರಿಗೆ ದಿನವೂ ಪೂಜಾದಿಗಳು ನೆರವೇರುತ್ತಿವೆ. ನಿಂತ ಭಂಗಿಯಲ್ಲಿ ಇರುವ ತಿಮ್ಮಪ್ಪ ದೇವರ ಕೈಯಲ್ಲಿ ಬಿಲ್ಲು ಮತ್ತು ಬಾಣ ಹಿಡಿದಿರುವುದು ಒಂದು ವಿಶೇಷವಾಗಿದೆ. ತಿಮ್ಮಪ್ಪ ದೇವರು ಈ ರೀತಿಯ ಭಂಗಿಯಲ್ಲಿ ಇರುವುದು ಬೇರೆ ಎಲ್ಲೂ ಕಾಣಸಿಗಲಾರದು. ದೇವಾಲಯದ ಚದುರಂಗ ಮಂಟಪದ ಮಧ್ಯೆ ಭೂ ಚಕ್ರ ಗಂಗೆ ಎಂದೇ ಹೆಸರಾದ ಬಾವಿ ಇದೆ. ಇಲ್ಲಿ ಆಗಾಗ್ಗೆ ನೀರು ಉಕ್ಕಿ ಹರಿಯುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಹಲವು ದಶಕಗಳ ಹಿಂದೆ ಕಳ್ಳ ಕಾಕರ ಭಯವಿದ್ದ ಕಾರಣಕ್ಕಾಗಿ ದೇವಾಲಯದ ಕಂಚಿನ ರಥವನ್ನು ಈ ಬಾವಿಯಲ್ಲಿ ಹಾಕಿದ್ದರು ಎನ್ನುತ್ತಾರೆ ಹಿರಿಯರಾದ ನಾರೇಗೌಡ. ಇಲ್ಲಿ ಮತ್ತೊಂದು ವಿಶೇಷ ಎಂದರೆ ತಿಮ್ಮಪ್ಪನ ಸನ್ನಿಧಿ( ವಿಷ್ಣು) ಸಮೀಪವೇ ಶಿವ ಸನ್ನಿಧಿಯೂ ಇದೆ. ಎರಡೂ ದೇವಾಲಯಗಳು ಇರುವ ಹರಿಹರ ಕ್ಷೇತ್ರವಾಗಿ ಮಹತ್ವ ಪಡೆದಿದೆ.
*
ದೇವರ ಒಕ್ಕಲು : ಓರಗಲ್ ತಿಮ್ಮಪ್ಪ ಸ್ವಾಮಿಗೆ ಹಲವಾರು ಊರಿನಲ್ಲಿ ಒಕ್ಕಲು ಮನೆತನದವರು ಇದ್ದಾರೆ. ಹುಣಸೇಘಟ್ಟ, ಬೆಂಡೆಕೆರೆ, ಕುರುಬರಹಳ್ಳಿ, ನಾಗರಾಳು, ಗುಣ ಸಾಗರ, ಪಂಚನಹಳ್ಳಿ ತಾವರೆಹಳ್ಳಿ, ಕೆಂಚೇನಹಳ್ಳಿ, ದೇವರಹಳ್ಳಿ , ಬೋಳನಹಳ್ಳಿ, ಗಣಪತಿ ಹಳ್ಳಿ, ಹಳ್ಳದ ಹಳ್ಳಿ, ವಡೇರಹಳ್ಳಿ ಮೊದಲಾದ ಗ್ರಾಮದ ಸಾವಿರಾರು ಕುಟುಂಬಗಳಿಗೆ ತಿಮ್ಮಪ್ಪ ಮನೆದೇವರು ಮತ್ತು ಕುಲದೇವರು. ಅವರೆಲ್ಲರೂ ಈ ಕ್ಷೇತ್ರ ಕ್ಕೆ ಬಂದು ದರ್ಶನ ಮಾಡಿ, ಪೂಜಾದಿಗಳನ್ನು ಆಗಾಗ್ಗೆ ಸಮರ್ಪಿಸಿ ತೆರಳುವುದು ವಾಡಿಕೆಯಾಗಿದೆ.
ಅನ್ನ ಸಂತರ್ಪಣೆ: ಅರಸೀಕೆರೆ ಸಮೀಪದ ಗುಡ್ಡದ ಮೇಲೆ ನೆಲೆಸಿರುವ ತಿಮ್ಮಪ್ಪ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ದೇವಾಲಯದ ಅಭಿವೃದ್ಧಿ ಸಮಿತಿಯು ವಿಶೇಷ ದಿನಗಳಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿರುತ್ತದೆ. ಬಿಡಿ ದಿನಗಳಲ್ಲಿ ಬರುವ ಭಕ್ತರಿಗೆ ತೀರ್ಥ ಪ್ರಸಾದವನ್ನು ನೀಡುವ ವ್ಯವಸ್ಥೆ ಇದೆ. ದಾನಿಗಳು ಸಹಕಾರ ನೀಡಿದರೆ ಪ್ರತಿ ದಿನವೂ ಅನ್ನ ಸಂತರ್ಪಣೆ ಮಾಡುವ ನಿಟ್ಟಿನಲ್ಲಿ ಸಮಿತಿ ಯೋಜನೆ ರೂಪಿಸಿದೆ. ಅದು ಶೀಘ್ರವೇ ಕಾರ್ಯರೂಪಕ್ಕೆ ಬರಲು ಎಲ್ಲರ ಬೆಂಬಲ ಬೇಕಿದೆ ಎನ್ನುತ್ತಾರೆ ದೇವಾಲಯ ಟ್ರಸ್ಟ್ ಅಧ್ಯಕ್ಷ ಹುಣಸೆ ಘಟ್ಟ ನಾಗಭೂಷಣ.
*
ಬೇಕಿದೆ ಸೂಕ್ತ ಭದ್ರತೆ: ಗುಡ್ಡದ ಮೇಲೆ ಇರುವ ದೇವಾಲಯಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಬೇಕಾಗಿದೆ. ಹಲವು ಬಾರಿ ಇಲ್ಲಿ ಕಳ್ಳತನವಾಗಿದೆ. ದೇವರಲ್ಲಿ ಹುಂಡಿ ಹಣ ಸೇರಿದಂತೆ ಬೆಲೆಬಾಳುವ ಪೂಜಾ ಸಾಮಗ್ರಿಗಳು ಮತ್ತು ಆಭರಣಗಳು ಅಪಹರಣವಾಗಿದೆ. ನೂರಾರು ವರ್ಷ ಇತಿಹಾಸವಿರುವ ದೇವಾಲಯಕ್ಕೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಮುಂದಾಗಬೇಕು ಎಂಬುದು ದೇವಾಲಯದ ಅಭಿವೃದ್ಧಿ ಸಮಿತಿಯ ನಿರೀಕ್ಷೆಯಾಗಿದೆ. ಕ್ಷೇತ್ರಕ್ಕೆ ನೀರಿನ ಅವಶ್ಯಕತೆಗಾಗಿ ಒಂದು ಬೋರ್ವೆಲ್ ಕೊರೆಸಬೇಕು ಎಂದು ಸಂಕಲ್ಪ ಮಾಡಲಾಯಿತು. 15ಕ್ಕೂ ಹೆಚ್ಚು ಏಜೆನ್ಸಿಯವರು ಬಂದು ಯತ್ನಿಸಿದರೂ ಅವರು ಇಲ್ಲಿ ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ಕಡೆಗೆ ಬೋರ್ ಕೊರೆಯುವ ಲಾರಿಯೊಂದರಲ್ಲಿ ಸ್ವ ಇಚ್ಛೆಯಿಂದ ಬಂದ ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸಿದಾಗ ಧಾರಾಕಾರ ಜಲ ದೊರಕಿತು. ಇದು ದೇವರ ಪವಾಡಕ್ಕೆ ಸಾಕ್ಷಿ ಎನ್ನುತ್ತಾರೆ ದೇವಾಲಯ ಅಭಿವೃದ್ಧಿ ಸಮಿತಿಯ ಸದಸ್ಯ ನ್ಯಾರೇಗೌಡ.
*
ತಲುಪುವುದು ಹೇಗೆ ?
ಬೆಂಗಳೂರಿನಿಂದ 190 ಕಿ.ಮೀ, ಜಿಲ್ಲಾ ಕೇಂದ್ರ ಹಾಸನದಿಂದ 50 ಕಿಮೀ, ಕಡೂರಿನಿಂದ 40 ಮತ್ತು ತಾಲೂಕು ಕೇಂದ್ರ ಅರಸೀಕೆರೆ ನಗರದಿಂದ 8 ಕಿಮೀ ದೂರದಲ್ಲಿ ಓರಗಲ್ ತಿಮ್ಮಪ್ಪನ ಸನ್ನಿಧಿ ಇದೆ. ರಾಷ್ಟ್ರೀಯ ಹೆದ್ದಾರಿ 206 ಮಾರ್ಗವಾದ ಕಾರಣ ಸೂಕ್ತವಾದ ಬಸ್ ವ್ಯವಸ್ಥೆಯೂ ಇದೆ. ಸ್ವಂತ ವಾಹನದಲ್ಲೂ ಕ್ಷೇತ್ರಕ್ಕೆ ಬರಬಹುದು.
ಓರಗಲ್ ತಿಮ್ಮಪ್ಪ ದೇವರ ಬೆಟ್ಟ ಪರಿಸರ ಸಂರಕ್ಷಣಾ ಪ್ರದೇಶವಾಗಿದೆ. ಭಕ್ತರು ದೇವರ ದರ್ಶನದೊಂದಿಗೆ ಶಾಂತಿಯನ್ನೂ ಅರಸಿ ಬರುತ್ತಾರೆ. ಇದೊಂದು ನಿಸರ್ಗ ನಿರ್ಮಿತ ವನವಾಗಿದೆ. ಬರುವ ಭಕ್ತರಿಗೆ ನಿತ್ಯ ದಾಸೋಹ ಮತ್ತು ಮೂಲ ಸೌಕರ್ಯ ಒದಗಿಸುವುದು ನಮ್ಮ ಧ್ಯೇಯವಾಗಿದೆ.
ಹುಣಸೆ ಘಟ್ಟ ನಾಗಭೂಷಣ
ದೇವಾಲಯ ಟ್ರಸ್ಟ್ ಅಧ್ಯಕ್ಷ
*
ನಮ್ಮ ಪೂರ್ವಜರು ನಡೆಸಿಕೊಂಡ ಪದ್ಧತಿಯನ್ನು ನಾನು ಅನುಸರಿಸಿಕೊಂಡು ಬರುತ್ತಿದ್ದೇನೆ. ಶ್ರೀ ಸ್ವಾಮಿಯವರ ಪೂಜೆ ಮತ್ತು ಧಾರ್ಮಿಕ ವಿಧಿಗಳನ್ನು ಪಾಲಿಸುವುದರಿಂದ ಹಲವರಿಗೆ ಒಳಿತಾಗಿದೆ.
ಪುಟ್ಟರಂಗನಾಥ
ಅರ್ಚಕರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net