ಅರಕಲಗೂಡು ತಾಲೂಕಿನ ಮುಗಳೂರು ಗ್ರಾಮದಲ್ಲಿ ಆಯೋಜಿಸಿದ್ದ ದೊಡ್ಡಮಗ್ಗೆ ಹೋಬಳಿ ಮಟ್ಟದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಭಿಮಾನಿಗಳು ಹಾಗೂ ಬೆಂಬಲಿಗರ ಸಭೆಯಲ್ಲಿ ಕಿಸಾನ್ ರೈತ ಸಂಘದ ಜಿಲ್ಲಾಧ್ಯಕ್ಷ ಯೋಗಣ್ಣ ಮಾತನಾಡಿದರು. ಪಾಂಡುರಂಗ, ಪ್ರಸನ್ನ, ರಾಮಶೇಷು, ಮಂಜುನಾಥ್, ಧರ್ಮ ಇತರರಿದ್ದರು.
Published on:
Copied
Follow Us
ಅರಕಲಗೂಡು:
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಜನರ ಸೇವೆಗೆ ಮುಂದಾಗಬೇಕು ಎಂದು ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಒತ್ತಾಯಿಸಿದರು.
ತಾಲೂಕಿನ ಮುಗಳೂರು ಗ್ರಾಮದ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಎ.ಟಿ.ರಾಮಸ್ವಾಮಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಮುಖಂಡರು, ರಾಮಸ್ವಾಮಿ ಅವರು ರಾಜಕೀಯದಿಂದ ದೂರ ಉಳಿಯದೆ ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಜನರೊಂದಿಗೆ ಬೆರೆತು ಕ್ಷೇತ್ರದ ಅಭಿವೃದ್ಧಿ ಹಾಗೂ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ತಾಪಂ ಮಾಜಿ ಸದಸ್ಯ ಎಂ.ಟಿ.ಪಾಂಡುರಂಗ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಎ.ಟಿ.ರಾಮಸ್ವಾಮಿ ಅವರು ಸದಾ ಮುಂಚೂಣಿಯಲ್ಲಿದ್ದವರು. ತಮ್ಮ ಅಧಿಕಾರಾವಧಿಯಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಹಲವು ಗ್ರಾಮಗಳಿಗೆ ಕಾಂಕ್ರೀಟ್ ರಸ್ತೆಗಳು, ಗ್ರಾಮ ಸಂಪರ್ಕ ರಸ್ತೆಗಳು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿರುವ ಇಂತಹ ನಾಯಕರು ರಾಜಕೀಯದಲ್ಲಿ ಹಿಂದುಳಿಯಬಾರದು ಎಂದು ಅವರು ಮನವಿ ಮಾಡಿದರು.
ಮುಖಂಡ ಪ್ರಸಾದ್ ಮಾತನಾಡಿ, ಎ.ಟಿ.ರಾಮಸ್ವಾಮಿ ಅವರು ಜನರ ಹಿತದೃಷ್ಟಿಯಿಂದ ಉತ್ತಮವಾದ ತೀರ್ಮಾನ ಕೈಗೊಳ್ಳಬೇಕು. ಅವರ ಬೆಂಬಲಕ್ಕೆ ಅಪಾರ ಸಂಖ್ಯೆಯ ಜನರಿದ್ದು, ಯಾವುದೇ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅವರೊಂದಿಗೆ ನಿಲ್ಲಲು ಸಿದ್ಧರಿದ್ದಾರೆ ಎಂದು ತಿಳಿಸಿದರು.
ಕಿಸಾನ್ ರೈತ ಸಂಘದ ಜಿಲ್ಲಾಧ್ಯಕ್ಷ ಯೋಗಣ್ಣ ಮಾತನಾಡಿ, ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಪ್ರಾಮಾಣಿಕತೆ, ಸರಳತೆ ಹಾಗೂ ಜನಪರ ಕಾಳಜಿ ಹೊಂದಿರುವ ರಾಜಕಾರಣಿಗಳ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಎ.ಟಿ. ರಾಮಸ್ವಾಮಿ ಅವರು ಇಂತಹ ಗುಣಗಳನ್ನು ಹೊಂದಿರುವ ನಾಯಕರಾಗಿದ್ದು, ರೈತರು, ಗ್ರಾಮೀಣ ಜನರು ಸೇರಿದಂತೆ ವಿವಿಧ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ. ಹೀಗಾಗಿ ಅವರು ಸಕ್ರಿಯ ರಾಜಕಾರಣಕ್ಕೆ ಮರಳಿ ಜನರ ಪರವಾಗಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
ಜನರೊಂದಿಗೆ ನಿರಂತರ ಸಂಪರ್ಕ, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಹಾಗೂ ಜನಪರ ವಿಚಾರಗಳಲ್ಲಿ ಸ್ಪಂದಿಸುವ ನಾಯಕತ್ವ ಇಂದಿನ ಸಂದರ್ಭದಲ್ಲಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎ.ಟಿ. ರಾಮಸ್ವಾಮಿ ಅವರು ತಮ್ಮ ರಾಜಕೀಯ ಅನುಭವವನ್ನು ಬಳಸಿಕೊಂಡು ಮತ್ತೆ ಸಕ್ರಿಯವಾಗಿ ರಾಜಕೀಯಕ್ಕೆ ಮರಳಬೇಕು ಎಂದರು.
ಮುಖಂಡರಾದ ಮಂಜುನಾಥ್ ರಾಜೇಅರಸ್, ಕೃಷ್ಣ, ಈರಪ್ಪ, ದೊಡ್ಡಹಳ್ಳಿ ಮಂಜು, ರಾಮಶೇಷು, ಧರ್ಮೇಗೌಡ, ಶಿವಣ್ಣ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳ ಗ್ರಾಮಸ್ಥರು, ಅಭಿಮಾನಿಗಳು ಹಾಗೂ ಮುಖಂಡರು ಇದ್ದರು.