ಹಳೇಬೀಡು ಸಮೀಪದ ಖಾಸಗಿ ಭವನದ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಮಾಜಿ ಸಚಿವ ಪಿ. ಶಿವರಾಂ ಉದ್ಘಾಟಿಸಿದರು. ಸಂಸದ ಶ್ರೇಯಸ್ ಪಟೇಲ್, ದೇಶಾಣಿ ಆನಂದ್ ಮತ್ತಿತರರಿದ್ದರು.
ಹಳೇಬೀಡು : ಬೇಲೂರು ತಾಲೂಕಿನಲ್ಲಿ ಮೊದಲ ಬಾರಿಗೆ ಬೂತ್ ಮಟ್ಟದ ಪ್ರತಿನಿಧಿಗಳನ್ನು ನೇಮಕ ಮಾಡುವ ಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದ್ದು, ಜಿಲ್ಲೆಯ ಎಲ್ಲ ಹೋಬಳಿ ಮಟ್ಟದಲ್ಲೂ ಕಾಂಗ್ರೆಸ್‌ನಿಂದ ಬಿಎಲ್‌ಎಗಳನ್ನು ನೇಮಕ ಮಾಡಲಾಗುವುದು ಎಂದು ಮಾಜಿ ಸಚಿವ ಬಿ.ಶಿವರಾಂ ತಿಳಿಸಿದರು.
ಸಮೀಪದ ಖಾಸಗಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಹಳೇಬೀಡು-ಜಾವಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ಲಾಕ್ ಮಟ್ಟದ ಏಜೆಂಟ್‌ಗಳು ಪಕ್ಷದ ಶಕ್ತಿ. ಅವರು ಕ್ರಿಯಾಶೀಲರಾಗಿ ಕೆಲಸ ಮಾಡಿದರೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಗ್ಯಾರಂಟಿ ಯೋಜನೆಗಳ ಪ್ರಚಾರದ ಕೊರತೆಯಿಂದಾಗಿ ಕೆಲವು ಚುನಾವಣೆಗಳಲ್ಲಿ ಸೋಕು ಕಾಣುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನೂನ್ಯತೆಗಳನ್ನು ಸರಿಪಡಿಸಿಕೊಂಡರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆಲುವು ನಿಶ್ಚಿತ ಎಂದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಅಭ್ಯರ್ಥಿ ಜತೆಗೆ ಬೆನ್ನೆಲುಬಾಗಿ ಕೆಲಸ ಮಾಡುವವರು ಬಿಎಲ್‌ಎಗಳು. ಮಾಜಿ ಸಚಿವ ಬಿ. ಶಿವರಾಂ ಮೊದಲ ಬಾರಿಗೆ ಬೇಲೂರು ತಾಲೂಕಿನಲ್ಲಿ ಬೂತ್ ಮಟ್ಟದ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಪಕ್ಷ ಮತ್ತು ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ದುಡಿದರೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಬಹುದು. ಮುಂದಿನ ಬಾರಿ ಬೇಲೂರು ಕ್ಷೇತ್ರದಲ್ಲಿ ಶಿವರಾಂ ಅವರನ್ನು ಗೆಲ್ಲಿಸುವ ಮೂಲಕ ಗ್ಯಾರಂಟಿ ಯೋಜನೆಗಳ ಋಣವನ್ನು ತೀರಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಇದರ ಜತೆಗೆ ಹಳೇಬೀಡು-ಬೇಲೂರು-ಶ್ರವಣಬೆಳಗೊಳದ ಐತಿಹಾಸಿಕ ತಾಣಗಳನ್ನು ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಗೆ ಸೇರಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಬೇಲೂರು ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ದೇಶಾಣಿ ಆನಂದ್ ಮಾತನಾಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ಹಮ್ಮಿಕೊಳ್ಳಲಾಗಿದೆ. ಶಕ್ತಿಯೋಜನೆ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ಮಹಿಳಾ ಮತದಾರರನ್ನು ಪಕ್ಷದೆಡೆಗೆ ಸೆಳೆಯಬೇಕು ಎಂದು ಹೇಳಿದರು.
ಕೆಪಿಸಿಸಿ ವೀಕ್ಷಕ ವಿಜಯಕುಮಾರ್, ಕಾರ್ಯಾಧ್ಯಕ್ಷ ಶಶಿಧರ್, ತಾಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶರತ್, ಮುಖಂಡರಾದ ಜೀಪ್ ಚಂದ್ರಶೇಖರ್, ಬೈರೇಶ್, ವೀರಣ್ಣ, ಯತೀಶ್ ಮತ್ತಿತರರಿದ್ದರು.