ರಸ್ತೆ ಅಭಿವೃದ್ಧಿಗೆ ಭಿಕ್ಷೆ ಎತ್ತುವ ಚಳವಳಿ

 ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯ ರಸ್ತೆ ಮತ್ತು ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ವಿಫಲವಾಗಿರುವ ಸರ್ಕಾರದ ವಿರುದ್ಧ ರೈತ ಸಂಘ ದೊಡ್ಡಿಂದುವಾಡಿ ಗ್ರಾಮದಲ್ಲಿ ಸಾರ್ವಜನಿಕರಿಂದ ಭಿಕ್ಷೆ ಎತ್ತಿ ಪ್ರತಿಭಟನೆ ನಡೆಸಿದರು.
ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯ ರಸ್ತೆ ಮತ್ತು ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ವಿಫಲವಾಗಿರುವ ಸರ್ಕಾರದ ವಿರುದ್ಧ ರೈತ ಸಂಘ ದೊಡ್ಡಿಂದುವಾಡಿ ಗ್ರಾಮದಲ್ಲಿ ಸಾರ್ವಜನಿಕರಿಂದ ಭಿಕ್ಷೆ ಎತ್ತಿ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘದ ಸದಸ್ಯರಿಂದ ಪ್ರತಿಭಟನೆ
  • ದೊಡ್ಡಿಂದುವಾಡಿ ಗ್ರಾಮದಲ್ಲಿ ಆಕ್ರೋಶ
ಕೊಳ್ಳೇಗಾಲ: ಹಳ್ಳದಿಂದ ಕೂಡಿರುವ ತಾಲೂಕಿನ ಗುಂಡಾಲ್ ಜಲಾಶಯದ ರಸ್ತೆ ಮತ್ತು ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ವಿಫಲರಾಗಿರುವ ಸರ್ಕಾರದ ವಿರುದ್ಧ ಸಾರ್ವಜನಿಕರಿಂದ ಭಿಕ್ಷೆ ಎತ್ತುವ ಚಳವಳಿಯನ್ನು ಸೋಮವಾರ ರಾಜ್ಯ ರೈತ ಸಂಘದ ಸದಸ್ಯರು ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ದೊಡ್ಡಿಂದುವಾಡಿ ಹಾಗೂ ಸಿಂಗನಲ್ಲೂರು ಶಾಖೆ ಪದಾಧಿಕಾರಿಗಳು ಕಾಮಗೆರೆ, ಸಿಂಗನಲ್ಲೂರು ಮತ್ತು ದೊಡ್ಡಿಂದುವಾಡಿ ಗ್ರಾಮಗಳಲ್ಲಿ ಭಿಕ್ಷಾಟನೆ ಮಾಡಿ ಬಳಿಕ ದೊಡ್ಡಿಂದುವಾಡಿ ವೃತ್ತದಲ್ಲಿ ಸಮಾವೇಶಗೊಂಡು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ ಮಾತನಾಡಿ, ಗುಂಡಾಲ್ ಜಲಾಶಯ ರಸ್ತೆ, ದೊಡ್ಡಿಂದುವಾಡಿ ವೃತ್ತದಿಂದ ಲೊಕ್ಕನಹಳ್ಳಿ ಹೆದ್ದಾರಿ ರಸ್ತೆ ಮತ್ತು ಕೊಂಗರಹಳ್ಳಿ ಗ್ರಾಮದಿಂದ ಲೊಕ್ಕನಹಳ್ಳಿ ರಾಜ್ಯ ಹೆದ್ದಾರಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನರು ಜೀವ ಭಯದಲ್ಲಿ ಸಂಚಾರ ಮಾಡಬೇಕಿದೆ. ಬಹಳ ವರ್ಷಗಳಿಂದ ರಸ್ತೆ ಅಭಿವೃದ್ಧಿಯಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತಗಳು ಸಂಚರಿಸಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ರಸ್ತೆಗಳು ಪಂಚಾಯತ್ ರಾಜ್ ಇಲಾಖೆ, ಲೋಕೋ ಪಯೋಗಿ ಇಲಾಖೆ ಮತ್ತು ಜಲ ಸಂಪನ್ಮೂಲ ಇಲಾಖೆಗೆ ಸೇರಿದೆ. ರಸ್ತೆ ಅಭಿವೃದ್ಧಿಪಡಿಸಲು ಸಾರ್ವಜನಿಕರಿಂದ ಭಿಕ್ಷೆ ಎತ್ತಿ ಇಲಾಖೆಗೆ ಹಣ ನೀಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಮಾಹಿತಿ ಇಲ್ಲದ ಅಧಿಕಾರಿಗಳಿಗೆ ತರಾಟೆ
ಗುಂಡಾಲ್ ಜಲಾಶಯ ರಸ್ತೆ ಜಲ ಸಂಪನ್ಮೂಲ ಇಲಾಖೆಗೆ ಸೇರಿದೆಯೋ ಅಥವಾ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಬರಲಿದೆಯೋ ಎಂದು ರೈತರು ಅಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ನೀರಾವರಿ ಇಲಾಖೆ ಎಇಇ ರಾಮಕೃಷ್ಣ ಅವರು 1 ವಾರ ಅವಕಾಶ ಕೊಡಿ ಮಾಹಿತಿ ಪಡೆದು ಹೇಳುವುದಾಗಿ ಉತ್ತರಿಸಿದಕ್ಕೆ ರೈತರು ಆಕ್ರೋಶ ಹೊರಹಾಕಿದರು.
ಅಧಿಕಾರಿಯಾಗಿ ನಿಮಗೆ ಮಾಹಿತಿ ಇಲ್ಲ, ಆದರೆ ನಿಮ್ಮ ಇಲಾಖೆಗೆ ಸೇರಿದ ಗುಂಡಾಲ್ ಜಲಾಶಯಕ್ಕೆ ನಿತ್ಯ ಹದಗೆಟ್ಟ ರಸ್ತೆಯಲ್ಲಿಯೇ ಸಂಚರಿಸುತ್ತಿರುವ ನಿಮಗೆ ಗೊತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲದೆ, ಕೊತ್ತನೂರು ರಸ್ತೆ ಮತ್ತು ದೊಡ್ಡಿಂದುವಾಡಿ ಗ್ರಾಮದಿಂದ ಲೊಕ್ಕನಹಳ್ಳಿ ರಸ್ತೆಗೆ ಸಂಪರ್ಕ ಬೆಸೆಯುವ ರಸ್ತೆ ಅಭಿವೃದ್ಧಿಗೆ 5 ತಿಂಗಳ ಹಿಂದೆ 24.85 ಕೋಟಿ ರೂ.ವೆಚ್ಚದಲ್ಲಿ ಭೂಮಿಪೂಜೆ ಮಾಡಲಾಗಿದೆ. ಆದರೆ, ಕೊತ್ತನೂರು ಭಾಗದಲ್ಲಿ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ದೊಡ್ಡಿಂದುವಾಡಿ ಬಳಿ ಕಾಮಗಾರಿ ಆರಂಭವೇ ಆಗಿಲ್ಲ ಎಂದು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ್, ಇಂಜಿನಿಯರ್ ಸುರೇಂದ್ರ ಅವರಿಗೆ ರೈತರು ತರಾಟೆಗೆ ತೆಗೆದು ಕೊಂಡರು.
ಬಳಿಕ ಎಇಇ ಪುರುಷೋತ್ತಮ್ 15 ದಿನಗಳಲ್ಲಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ಇನ್ನು ಕೊಂಗರಹಳ್ಳಿ ಗ್ರಾಮದಿಂದ ಲೊಕ್ಕನಹಳ್ಳಿ ರಸ್ತೆಗೆ ಸಂಪರ್ಕ ಬೆಸೆಯುವ ರಸ್ತೆ ಹದಗೆಟ್ಟಿರುವ ಬಗ್ಗೆ ಸಂಬಂಧಪಟ್ಟ ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಜಿ.ಪಂ. ಉಪವಿಭಾಗದ ಎಇಇ ಕುಮಾರ್, ಇಂಜಿನಿಯರ್ ಮಂಜು ವಿರುದ್ಧ ಅಸಮಾಧಾನ ಹೊರಹಾಕಿದರು. ಅಲ್ಲದೆ, ಕೇಂದ್ರ ಸ್ಥಾನದಲ್ಲಿ ಉಳಿಯದ ದೊಡ್ಡಿಂದುವಾಡಿ ಪಿಡಿಒ ಮರಿಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಹಣ ಪಡೆಯದ ಅಧಿಕಾರಿಗಳು
ರೈತರು ಭಿಕ್ಷಾಟನೆ ಮಾಡಿ ಒಟ್ಟು 3555 ರೂ. ನ್ನು ಸಂಗ್ರಹಿಸಿದರು. ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ತಲಾ 1,185 ರೂ.ಅನ್ನು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀಡಲು ಮುಂದಾದಾಗ ಅಧಿಕಾರಿಗಳು ಸ್ವೀಕರಿಸಲಿಲ್ಲ. ನಾವು ಸಾರ್ವಜನಿಕರ ಹಣ ಸ್ವೀಕರಿಸುವಂತಿಲ್ಲ. ನಮಗೆ ಮನವಿ ಪತ್ರ ನೀಡಿ ಮುಂದಿನ ಕ್ರಮ ವಹಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಬಳಿಕ, ರೈತ ಸಂಘದ ಪದಾಧಿಕಾರಿಗಳು ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು. ಭಿಕ್ಷೆ ಎತ್ತಿದ ಹಣವನ್ನು ಮುಖ್ಯಮಂತ್ರಿಗಳ ನಿಧಿಗೆ ನೀಡಲು ನಿರ್ಧರಿಸಿ ಪ್ರತಿಭಟನೆ ಕೈಬಿಟ್ಟರು.
ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ಮಧುವನಹಳ್ಳಿ ಬಸವರಾಜು, ಅಣಗಳ್ಳಿ ಗ್ರಾಮ ಘಟಕ ಕೀರ್ತಿ, ಲಾರೆನ್ಸ್, ತಾಲೂಕು ಯುವ ಘಟಕ ಅಧ್ಯಕ್ಷ ವಾಸು, ದೊಡ್ಡಿಂದುವಾಡಿ ಗ್ರಾಮ ಘಟಕ ಅಧ್ಯಕ್ಷ ವಸಂತ ಕುಮಾರ್, ಉಪಾಧ್ಯಕ್ಷ ಸುರೇಂದ್ರ, ಮನುಗೌಡ, ರವಿ, ನಾಗೇಂದ್ರ, ಶಿವರಾಮ್, ಗೋವಿಂದರಾಜು, ನಂದೀಶ್, ಅಬ್ದುಲ್ ಖಾದೀರ್, ಸಿಂಗನಲ್ಲೂರು ಗ್ರಾಮ ಘಟಕ ಅಧ್ಯಕ್ಷ ಬೆಟ್ಟೇಗೌಡ, ಆರ್.ಅರುಪದರಾಜ್, ಜಾನ್ ಜೋಸೆಫ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net