ಹಿರಿಸಾವೆಯ ಶ್ರೀಕಂಠಯ್ಯ ವೃತ್ತದಲ್ಲಿ ಪೊಲೀಸ್ ಠಾಣೆ ಹಾಗೂ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಮಾದಕ ವ್ಯಸನ ನಿಯಂತ್ರಣ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಪಿಎಸ್‌ಐ ರೂಪಾದೇವಿ ಬಿರಾದರ್, ಮುಖ್ಯ ಶಿಕ್ಷಕಿ ಎಚ್.ಬಿ.ಉಮಾ, ವಿದ್ಯಾರ್ಥಿಗಳು ಸೇರಿ ಇತರರು ಭಾಗಿಯಾಗಿದ್ದರು.
ಹಿರೀಸಾವೆ: ಮದ್ಯ ಹಾಗೂ ತಂಬಾಕು ಸೇವನೆಯಿಂದ ಆರೋಗ್ಯದ ಜತೆಗೆ ಪ್ರಾಣ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹಿರೀಸಾವೆ ಪಿಎಸ್‌ಐ ರೂಪಾದೇವಿ ಬಿರಾದರ್ ತಿಳಿಸಿದರು.
ಪಟ್ಟಣದ ಶ್ರೀಕಂಠಯ್ಯ ವೃತ್ತದಲ್ಲಿ ಹಿರೀಸಾವೆ ಪೊಲೀಸ್ ಠಾಣೆ ಹಾಗೂ ಪಿಎಂ ಶ್ರೀ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಮಾದಕ ವ್ಯಸನ ನಿಯಂತ್ರಣ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಧೂಮಪಾನದಿಂದ ಕ್ಯಾನ್ಸರ್ ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಪಟ್ಟಂತೆ ವಿವಿಧ ಕಾಯಿಲೆಗಳು ಬರುತ್ತವೆ. ಇದರಿಂದ ನಿಮ್ಮನ್ನೇ ನಂಬಿಕೊಂಡಿರುವವರ ಬದುಕು ಬೀದಿಗೆ ಬರಲಿದೆ. ಗೌರವಕ್ಕೂ ಧಕ್ಕೆಯಾಗಲಿದೆ ಎಂದು ತಿಳಿಸಿದರು.
ಪಾಲಕರ ನಡೆ-ನುಡಿ ಹಾಗೂ ದೈನಂದಿನ ಬದುಕು ಮಕ್ಕಳ ಭವಿಷ್ಯಕ್ಕೆ ಮಾದರಿಯಾಗಬೇಕು. ಮನೆಯ ವಾತಾವರಣವು ಮಕ್ಕಳಲ್ಲಿ ಸಂಸ್ಕಾರ ಕಲಿಸುತ್ತದೆ. ಪಾಲಕರು ಮಕ್ಕಳ ಮುಂದೆ ಅನುಚಿತವಾಗಿ ವರ್ತಿಸಬಾರದು. ಪಾಲಕರ ಮಾತು-ಮಾರ್ಗವು ಮಕ್ಕಳಲ್ಲಿ ಮತ್ತಷ್ಟು ಸಂಸ್ಕಾರ ಹೆಚ್ಚಿಸಲಿದೆ. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಶಾಲಾ-ಕಾಲೇಜು, ದೇಗುಲ ಹಾಗೂ ಪ್ರಾರ್ಥನಾ ಮಂದಿರಗಳ ಬಳಿ ಮದ್ಯ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ಅಕ್ಷಮ್ಯ ಅಪರಾಧವಾಗಿದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ಮದ್ಯಪಾನ ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಾಗೃತಿ ಜಾಥಾ: ಮಾದಕ ದ್ರವ್ಯ ವ್ಯಸನ ನಿಯಂತ್ರಣ ಅಭಿಯಾನದಡಿ ಪಿಎಂ ಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಿಂದ ಜಾಗೃತಿ ಜಾಥಾ ಪ್ರಾರಂಭಗೊಂಡು, ಹಳೆ ಬಿಎಂ ರಸ್ತೆ ಮಾರ್ಗವಾಗಿ ಶ್ರೀಕಂಠಯ್ಯ ವೃತ್ತಕ್ಕೆ ಆಗಮಿಸಿತು. ವಿದ್ಯಾರ್ಥಿಗಳು, ಮದ್ಯಪಾನ ಮತ್ತು ಧೂಮಪಾನ ಕುರಿತು ಚುಟುಕು ನಾಟಕ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಶಾಲೆಯ ಮುಖ್ಯಶಿಕ್ಷಕಿ ಎಚ್.ಬಿ.ಉಮಾ, ಸಹ ಶಿಕ್ಷಕರಾದ ಎಲ್.ಎಸ್.ಧರ್ಮೇಶ್, ಯೋಗೇಶ್, ವಿನಯ ಎಂ.ಗುನಗ, ಗೌರಮ್ಮ, ಶೋಭಾ, ದೇವಕಿ, ಶ್ವೇತಾ, ಲಕ್ಷ್ಮಿ, ರಕ್ಷಿತಾ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.