ಚನ್ನರಾಯಪಟ್ಟಣ ತಾಲೂಕು ಪದವೀಧರ ಪತ್ತಿನ ಸಹಕಾರ ಸಂಘದ 25-26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಅಭಿನಂದನಾ ಸಮಾರಂಭವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಸಹ ನಿರ್ದೇಶಕ ಸೊಪ್ಪಿನ ಹಳ್ಳಿ ಎಸ್.ಎನ್.ರಂಗೇಗೌಡರು ಉದ್ಘಾಟಿಸಿದರು. ಡಾ.ನಂಬಿಹಳ್ಳಿ ಚಂದ್ರಶೇಖರ್, ಎಚ್.ಎಂ.ನಾಗಪ್ಪ ಇತರರು ಇದ್ದರು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ, ಕೃಷಿ ಕ್ಷೇತ್ರ ಉದ್ಯಮವಾಗಿ ಬೆಳೆಯಲಿಲ್ಲ ಎಂದು ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಸಹ ನಿರ್ದೇಶಕ ಸೊಪ್ಪಿನಹಳ್ಳಿ ಎಸ್.ಎನ್.ರಂಗೇಗೌಡ ಬೇಸರ ವ್ಯಕ್ತಪಡಿಸಿದರು.
ಭಾನುವಾರ ಪಟ್ಟಣದ ನವೋದಯ ವಿದ್ಯಾಮಂದಿರದಲ್ಲಿ ತಾಲೂಕು ಪದವೀಧರ ಪತ್ತಿನ ಸಹಕಾರ ಸಂಘದ 25-26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರೈತ ಬೆಳೆದ ಪದಾರ್ಥಗಳು ಅವನ ಬಳಿ ಇದ್ದಾಗ ಎಲ್ಲವೂ ಮಣ್ಣೇ ಆಗಿರುತ್ತದೆ. ಬೇರೆಯವರಿಗೆ ಸೇರಿದರೆ ಅದು ಚಿನ್ನವಾಗುತ್ತದೆ. ಭಾರತದ ಜನಸಂಖ್ಯೆಯಲ್ಲಿ 30 ಕೋಟಿ ರೂ. ಜನರು ಮಾತ್ರ ಸಹಕಾರ ಸಂಘದ ಪ್ರಯೋಜನ ಪಡೆಯುತ್ತಿದ್ದಾರೆ. ಇದಕ್ಕೆ ಜಾತಿ ವ್ಯವಸ್ಥೆ ಸೇರಿದಂತೆ ಹಲವು ಕಾರಣಗಳಿವೆ. ಸಹಕಾರ ಸಂಘಗಳು ಗ್ರಾಮೀಣ ಅಭಿವೃದ್ಧಿ ಕಡೆ ಗಮನಹರಿಸಬೇಕು. ಹಳ್ಳಿಗಳ ಅಭಿವೃದ್ಧಿಗೆ ಸಹಕಾರ ಸಂಘಗಳು ಶ್ರಮಿಸಬೇಕು ಎಂದರು.
ಸಾಹಿತಿ ಹಾಗೂ ಶಿಕ್ಷಣ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಡಾ. ನಂಬಿಹಳ್ಳಿ ಚಂದ್ರಶೇಖರ್, ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ಎಂ.ನಾಗಪ್ಪ ಮಾತನಾಡಿದರು.
ಪದವೀಧರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ನಾರಾಯಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ರೈತ ಅನಿತಾ ನಾಗರಾಜು, ಶ್ರೀದೇವಿ ಶಿಕ್ಷಣ ಸಂಸ್ಥೆಯ ಸಿಇಒ ಡಾ.ಆಶಾ ವಿಜಯ್‌ಕುಮಾರ್ ಅವರನ್ನು ಅಭಿನಂದಿಸಲಾಯಿತು. ಪ್ರತಿಭಾವಂತ 20 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಹಕಾರ ಸಂಘದ ಉಪಾಧ್ಯಕ್ಷ ಜಿ.ಎಚ್.ಮಲ್ಲೇಶಯ್ಯ, ನಿರ್ದೇಶಕರಾದ ಕೆ.ಎ.ಕಾಳೇಗೌಡರು, ಕೆ.ಕುಮಾರ್, ಎಚ್.ಎಚ್.ಸತೀಶ್, ಪ್ರೊ.ಮಲ್ಲಯ್ಯ, ಸಿ.ಡಿ.ಜಯರಾಮ್, ಭೀಮೇಶ್, ಎನ್.ಬೈರೇಗೌಡ, ರುದ್ರೇಶ್, ಪ್ರಕಾಶ್, ಕೆ.ರಾಮಕೃಷ್ಣ ಶೆಟ್ಟಿ, ರಾಜಲಕ್ಷ್ಮೀ, ಸಿ.ಜಿ.ನಿರ್ಮಲಾ, ಎನ್.ಡಿ.ರಾಜೇಶ್ವರಿ, ಬಿ.ಎಲ್.ಶಿವರಾಮ, ಶಿವು ಅನಂತನಾರಾಯಣ್, ಎಂ.ಎಸ್.ಕಾಂತಾ, ಶೋಭಾ, ಶ್ರೇಯಸ್, ಅಶ್ವಿನಿ ಇತರರು ಇದ್ದರು.