ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾದರೆ ಕ್ರಮ

 ಅರಕಲಗೂಡಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಹಸೀಲ್ದಾರ್ ಸೌಮ್ಯಾ ಅವರು ಗ್ಯಾಸ್ ಏಜೆನ್ಸಿಗಳ ಮಾಲೀಕರು, ಗ್ರಾಹಕರ ಸಭೆ ನಡೆಸಿದರು. ಮಂಜುನಾಥ್, ರವಿಕುಮಾರ್ ಇತರರು ಇದ್ದರು.
ಅರಕಲಗೂಡಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಹಸೀಲ್ದಾರ್ ಸೌಮ್ಯಾ ಅವರು ಗ್ಯಾಸ್ ಏಜೆನ್ಸಿಗಳ ಮಾಲೀಕರು, ಗ್ರಾಹಕರ ಸಭೆ ನಡೆಸಿದರು. ಮಂಜುನಾಥ್, ರವಿಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • cylinder supply
ಅರಕಲಗೂಡು: ತಾಲೂಕಿನಲ್ಲಿರುವ ನಾಲ್ಕು ಗ್ಯಾಸ್ ಏಜೆನ್ಸಿಗಳಿಂದ ಒಟ್ಟು 44 ಸಾವಿರ ಗೃಹಬಳಕೆ ಸಿಲಿಂಡರ್ ಗ್ರಾಹಕರಿದ್ದು, ಎಲ್ಲರಿಗೂ ನಿಗದಿತ ಅವಧಿಯೊಳಗೆ ಸಿಲಿಂಡರ್ ಸರಬರಾಜು ಮಾಡಬೇಕು. ಇಲ್ಲದೆ ಇದ್ದರೆ ಕ್ರಮ ಜರುಗಿಸುವುದಾಗಿ ತಹಸೀಲ್ದಾರ್ ಕೆ.ಸಿ.ಸೌಮ್ಯಾ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಗ್ಯಾಸ್ ಏಜೆನ್ಸಿಗಳ ಮಾಲೀಕರು, ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಹೊಸ ಆದೇಶದ ಅನ್ವಯ ಗ್ರಾಮೀಣ ಭಾಗದ ಗ್ರಾಹಕರಿಗೆ 45ದಿನಗಳ ನಂತರದಲ್ಲಿ ಸಿಲಿಂಡರ್ ಸರಬರಾಜು ಮಾಡಬೇಕಿದೆ. ಅರಕಲಗೂಡು ಕೂಡ ಗ್ರಾಮೀಣ ಎಂದು ನಮೂದಾಗಿರುವ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ಯಾಸ್ ಏಜೆನ್ಸಿಗಳ ವ್ಯಾಪ್ತಿಯ ಗ್ರಾಹಕರಿಗೆ ಈ ನಿಯಮ ಅನ್ವಯ ಆಗಲಿದೆ. ಕಳೆದ ಮಾರ್ಚ್‌ನಿಂದ ಏಪ್ರಿಲ್ ಅಂತ್ಯದವರೆಗೆ ಶೇ.80ರಷ್ಟು ಗೃಹ ಬಳಕೆ ಅನಿಲ ಸರಬರಾಜು ಆಗಿದೆ. ಈ ಸಲುವಾಗಿ ಎಲ್ಲ ಗ್ರಾಹಕರಿಗೆ ನಿಯಮಾನುಸಾರ 45ದಿನಗಳ ನಂತದ ಸಿಲಿಂಡರ್ ದೊರೆಯಬೇಕಿದೆ. ಈ ಅವಧಿಯಲ್ಲಿ ಲೋಪವಾಗಿರುವುದಕ್ಕೆ ಏಜೆನ್ಸಿಗಳ ಮಾಲೀಕರ ಅವೈಜ್ಞಾನಿಕ ನಡವಳಿಕೆಯೇ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಎರಡು ಎಚ್‌ಪಿ, ಎರಡು ಭಾರತ್ ಗ್ಯಾಸ್ ಏಜೆನ್ಸಿಗಳು ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಕೊಣನೂರು ಮತ್ತು ಕೇರಳಾಪುರ ಎಚ್‌ಪಿ ಗ್ಯಾಸ್ ಏಜೆನ್ಸಿಗಳ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಸಿಲಿಂಡರ್ ಸರಬರಾಜು ಆಗುತ್ತಿದೆ. ಆದರೆ ಅರಕಲಗೂಡು, ಬರಗೂರು ಭಾರತ್ ಗ್ಯಾಸ್ ಏಜೆನ್ಸಿಗಳ ವ್ಯಾಪ್ತಿಯಲ್ಲಿ ಮಾತ್ರ ಸಮಸ್ಯೆ ತಲೆದೋರಿದೆ ಎಂದು ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ಇ ಕೆವೈಸಿ, ವಿಳಾಸ ಬದಲಾವಣೆ ಇತರ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಿಕೊಳ್ಳಿ. 45ದಿನಗಳ ನಂತರ ಬುಕ್ಕಿಂಗ್ ಆಗಿರುವ ಗ್ರಾಹಕರಿಗೆ ಮನೆಯ ಬಳಿಯೇ ಸಿಲಿಂಡರ್ ಪೂರೈಕೆ ಮಾಡಿ. ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ, ಇಲ್ಲವಾದರೆ ಏಜೆನ್ಸಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಆಹಾರ ಇಲಾಖೆ ಶಿರಸ್ತೇದಾರ್ ಮಂಜುನಾಥ್ ಮಾತನಾಡಿ, ಕಳೆದ ಎರಡೂವರೆ ತಿಂಗಳ ಅವಧಿಯಲ್ಲಿ ಅನಿಲ ಸರಬರಾಜು ಸಮಸ್ಯೆಗೆ ಸಂಬಂಧಿಸಿದ ಸಾಕಷ್ಟು ದೂರುಗಳು ಬಂದಿವೆ. ಈ ಸಲುವಾಗಿ ಅರಕಲಗೂಡು, ಬರಗೂರು ಏಜೆನ್ಸಿಗಳಿಗೆ ತೆರಳಿ ವಾಸ್ತವ ಅಧ್ಯಯನ ಮಾಡಲಾಗಿದೆ. ಏಜೆನ್ಸಿಗಳ ಮಾಲೀಕರು, ವಾಹನ ಚಾಲಕರಿಂದ ಗ್ರಾಹಕರಿಗೆ ತೊಂದರೆಯಾಗಿದ್ದು, ಇದು ಮತ್ತೆ ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕರವೇ ಗೌರವಾಧ್ಯಕ್ಷ ಎನ್.ರವಿಕುಮಾರ್ ಮಾತನಾಡಿದರು. ರೈತ ಸಂಘದ ಅಧ್ಯಕ್ಷ ಭುವನೇಶ್, ಕರವೇ ಮುಖಂಡರಾದ ಜಿಮ್ ಸೋಮು, ಅಕ್ಮಲ್ ಪಾಷ, ಗ್ಯಾಸ್ ಏಜೆನ್ಸಿಗಳ ಮಾಲೀಕರಾದ ಮೋಹನ್, ರಾಜೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net