ಸಕಲೇಶಪುರ: ಐದು ವರ್ಷ ಪೂರ್ಣಸೇವೆ ಸಲ್ಲಿಸಿದ ಹೊರಗುತ್ತಿಗೆ ವೈದ್ಯರನ್ನು ಶೀಘ್ರ ಖಾಯಂ ಮಾಡಿಕೊಳ್ಳಲು ಕ್ರಮ ವಹಿಸುವುದಾಗಿ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜೂ. 12ರ ರಾತ್ರಿ 11 ಗಂಟೆಗೆ ಪ್ರಾರಂಭವಾದ ಸಭೆ ಮಧ್ಯರಾತ್ರಿ 3 ಗಂಟೆಯ ತನಕ ನಡೆಯಿತು. ಆಸ್ಪತ್ರೆಯಲ್ಲಿನ ಕುಂದುಕೊರತೆಗಳನ್ನು ಆಲಿಸಿದ ಸಚಿವರು, ಸರ್ಕಾರಿ ಆಸ್ಪತ್ರೆ ಎಂದರೆ ಅದು ಕುಟುಂಬದ ಆಸ್ಪತ್ರೆಯೆಂದು ಭಾವಿಸಬೇಕು. ಯಾರೇ ರೋಗಿಗಳು ಬಂದರೂ ಅವರನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳಬೇಕು ಎಂದು ಸಿಬ್ಬಂದಿಗೆ ಸಲಹೆ ನೀಡಿದರು.
ಇನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಐದು ವರ್ಷ ಪೂರ್ಣಗೊಳಿಸಿ ಸೇವೆ ಸಲ್ಲಿಸಿದ ಹೊರಗುತ್ತಿಗೆ ವೈದ್ಯರನ್ನು ಶೀಘ್ರದಲ್ಲೇ ನೇಮಕಾತಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ ಸಚಿವರು, ಆಸ್ಪತ್ರೆಯಲ್ಲಿನ ಕುಂದುಕೊರತೆಗಳ ಬಗ್ಗೆ ರಾಜ್ಯಾದ್ಯಂತ ನೂತನ ಸಹಾಯವಾಣಿಯನ್ನು ಸ್ಥಾಪಿಸುವ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಡಿ-ಗ್ರೂಪ್ ನೌಕರರ ವೇತನವನ್ನು ಸರಿಯಾಗಿ ಪಾವತಿಸಬೇಕು. ಅವರಿಗೆ ಸಲ್ಲಬೇಕಾದ ಪಿಎಫ್, ಇಎಸ್‌ಐ ಸೇರಿದಂತೆ ಎಲ್ಲ ಸವಲತ್ತುಗಳನ್ನು ನೀಡಲು ಗುತ್ತಿಗೆದಾರರಿಗೆ ಸೂಚಿಸಬೇಕು. ಒಂದು ವೇಳೆ ಇದರಲ್ಲಿ ವಿಫಲರಾದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಹೇಳಿದರು.
ಕಿರಿಯ ವೈದ್ಯರು ಹಾಗೂ ಹೊಸದಾಗಿ ಬರುವ ವೈದ್ಯರಲ್ಲಿ ಆಸ್ಪತ್ರೆಯ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿಸಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಮಾನಸಿಕವಾಗಿ ಸದೃಢವಾಗಿರುವ ನಿವೃತ್ತ ವೈದ್ಯರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು ಸರ್ಕಾರದೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ವಸತಿಗೃಹಗಳ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಶಾಸಕರೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆ ಶತಮಾನ ದಾಟಿದ್ದು, ಆಸ್ಪತ್ರೆಗೆ ಕೆಲವು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಆ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಕೆಲಸ ಮಾಡುತ್ತೇನೆ. ಪ್ರತಿ ತಿಂಗಳು ನೂರಕ್ಕೂ ಹೆಚ್ಚು ಮಗು ಜನನವಾಗುತ್ತಿರುವುದರಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಪ್ರತ್ಯೇಕ ಮಾಡುವ ಯೋಜನೆಯನ್ನು ರೂಪಿಸುವುದಾಗಿ ಭರವಸೆ ನೀಡಿದರು.
ಅಲ್ಲದೆ, ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದು, ನುರಿತ ಸಿಬ್ಬಂದಿ ಇಲ್ಲದಿರುವುದು ಹಾಗೂ ಸ್ಕ್ಯಾನಿಂಗ್ ಮಾಡಿಸಲು ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇದು ಸರಿಯಲ್ಲ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಅರುಣ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳು ಮತ್ತು ವಿಷಜಂತುಗಳ ಕಡಿತ ಹೆಚ್ಚಾಗಿ ಕಂಡುಬರುವುದರಿಂದ, ಆಸ್ಪತ್ರೆಯಲ್ಲಿ ವಿಷಜಂತುಗಳ ಕಡಿತಕ್ಕೆ ಅಗತ್ಯ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಔಷಧಿಗಳನ್ನು ಹೊರಗಿನಿಂದ ತರಬೇಕೆಂದು ಚೀಟಿ ಬರೆದು ಕಳುಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮುಂದೆ ಈ ರೀತಿ ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಸಮಸ್ಯೆಗಳನ್ನು ಆಲಿಸಿದ ಬಳಿಕ ಸಚಿವರು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಆಸ್ಪತ್ರೆಯ ಆಡಳಿತಾಧಿಕಾರಿ ಅರುಣ್ ಕುಮಾರ್ ಹಾಗೂ ತಾಲೂಕು ವೈದ್ಯಾಧಿಕಾರಿ ಮಹೇಶ್ ಅವರ ಬಳಿ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಔಷಧಿ ಅಥವಾ ರೋಗಿಗಳ ಸೇವೆಯಲ್ಲಿ ಯಾವುದೇ ಸಮಸ್ಯೆ ಇದೆ ಎಂಬುದು ನಮ್ಮ ಗಮನಕ್ಕೆ ಬಂದರೆ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯ ಶಾಸಕ ಸಿಮೆಂಟ್ ಮಂಜು ಮಾತನಾಡಿ, ರಾಜ್ಯದ ಇತಿಹಾಸದಲ್ಲೇ ಮಧ್ಯರಾತ್ರಿವರೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮಂತ್ರಿ ಯಾರಾದರೂ ಇದ್ದರೆ ಅದು ಯು.ಟಿ. ಖಾದರ್ ಮಾತ್ರ. ವಿಧಾನಸಭಾ ಅಧ್ಯಕ್ಷರಾಗಿದ್ದಾಗ ಅವರ ಕಾರ್ಯವೈಖರಿಯನ್ನು ನೋಡಿದ್ದೇನೆ. ಸದನದಲ್ಲಿ ಮಾತನಾಡಲು ಎಲ್ಲ ಶಾಸಕರಿಗೂ ಸಮಾನ ಅವಕಾಶ ಕಲ್ಪಿಸಿದ ಮೊದಲ ಸಭಾಧ್ಯಕ್ಷರು ಇವರು ಎಂದರೆ ತಪ್ಪಾಗದು ಎಂದು ಹೇಳಿದರು.
ಆರೋಗ್ಯ ಇಲಾಖೆಯ ಕುರಿತು ಸಚಿವ ಯು.ಟಿ. ಖಾದರ್ ಅವರಿಗೆ ಆಳವಾದ ಜ್ಞಾನವಿದೆ. ಈ ಹಿಂದೆ ಕೂಡ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ ಎಂದು ಹೇಳಿದರು.
ಮಧ್ಯ ರಾತ್ರಿ ಪ್ರಗತಿ ಪರಿಶೀಲನಾ ಸಭೆ
ಸಂಜೆ 7 ಗಂಟೆಗೆ ನಿಗದಿಯಾಗಿದ್ದ ಪ್ರಗತಿ ಪರಿಶೀಲನಾ ಸಭೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಆಗಮಿಸಿದ್ದು ರಾತ್ರಿ 11 ಗಂಟೆಗೆ. ಅಲ್ಲಿಯವರೆಗೂ ಕಾಯ್ದಿದ್ದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು. ಕಡೆಗೆ ಸಭೆ ಮುಗಿದಾಗ ಸಮಯ ಮಧ್ಯರಾತ್ರಿ 3 ಗಂಟೆ ದಾಟಿತ್ತು. ಇನ್ನು ಸಚಿವರಾದ ಬಳಿಕ ಮೊದಲ ಬಾರಿಗೆ ಹಾಸನ ಜಿಲ್ಲೆಗೆ ಆಗಮಿಸಿದ ಯು.ಟಿ ಅವರಿಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದರಿಂದ ಸಭೆಗೆ ಆಗಮಿಸುವುದು ತಡವಾಗಿತ್ತು.