ಗುಡ್ಡಗಳ ಸಂರಕ್ಷಣೆಗೆ ಕ್ರಮ ಅವಶ್ಯ

ಹಿರೇಕಲ್ ಗುಡ್ಡದ ವಿಹಂಗಮ ನೋಟ.
ಹಿರೇಕಲ್ ಗುಡ್ಡದ ವಿಹಂಗಮ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಪತ್ತು
  • ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು
ಅರಸೀಕೆರೆ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಪತ್ತು ಹೊಂದಿರುವ ಗುಡ್ಡಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಪರಿಸರ ಪ್ರೇಮಿಗಳಿಂದ ಕೇಳಿಬಂದಿದೆ.
ತಾಲೂಕಿನ ಹಿರೇಕಲ್(ನಾಗಪುರಿ), ದೇಶಾಣಿ, ಗರುಡನಗಿರಿ ಸೇರಿದಂತೆ ವಿವಿಧೆಡೆ ಹಬ್ಬಿಕೊಂಡಿರುವ ಹಾಗೂ ಸಣ್ಣಪುಟ್ಟ ಗುಡ್ಡಗಳಲ್ಲಿರುವ ಅಪರೂಪದ ಸಸ್ಯ ಹಾಗೂ ಪ್ರಾಣಿಸಂಪತ್ತನ್ನು ರಕ್ಷಿಸುವ ಹೊಣೆಗಾರಿಕೆ ಅರಣ್ಯ ಇಲಾಖೆ ಅಧಿಕಾರಿಗಳ ಹೆಗಲೇರಿದ್ದು ಸವಾಲಿಗೆ ಸಜ್ಜುಗೊಳ್ಳಬೇಕಿದೆ.
ಮಾಲೇಕಲ್ ತಿರುಪತಿ ಗ್ರಾಮದ ಸರಹದ್ದಿನಿಂದ ಕಣಕಟ್ಟೆ ಹೋಬಳಿವರೆಗೂ ಸಹಸ್ರಾರು ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಹಿರಕಲ್ ಗುಡ್ಡ ಔಷಧ ಸಸ್ಯ ಹಾಗೂ ಪಾಣಿಗಳ ಆವಾಸ ಸ್ಥಾನವಾಗಿದೆ.
ಅಪರೂಪದ ಹುಲ್ಲು, ಭೂತಾಳೆ ಮರ, ಮಾಗಟಿ ಬೇರು ಸೇರಿದಂತೆ ಹಲವು ಪದಾರ್ಥಗಳನ್ನು ತರಲು ಗುಡ್ಡಕ್ಕೆ ತೆರಳುವ ಕಿಡಿಗೇಡಿಗಳು ಬೆಂಕಿ ಹಚ್ಚುವ ಸಂಭವ ಹೆಚ್ಚಿದೆ. ಇದರ ತಡೆಗೆ ಅಗತ್ಯ ಮುಂಜಾಗ್ರತೆ ವಹಿಸದಿದ್ದರೆ ಅಪಾರ ಪ್ರಮಾಣದ ಹುಲ್ಲು, ಗಿಡಗಂಟಿ, ಔಷಧ ಸಸ್ಯಗಳು ನಾಶವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಐತಿಹಾಸಿಕ (ನಾಗಪುರಿ) ಹಿರೇಕಲ್ ಗುಡ್ಡದ ಜತೆಗೆ ಗರುಡನಗಿರಿ, ಸಿದ್ದರಬೆಟ್ಟ, ದೇಶಾಣಿ, ಬೆಲವತ್ತಳ್ಳಿ, ಚಿಕ್ಕಬೆಟ್ಟ, ಹಿಟ್ಟಕಲ್ಲು, ಗೂರಲು ಮರಟಿ, ಮಾದನಹಳ್ಳಿ, ದೇಶಾಣಿ ಗ್ರಾಮಗಳ ಆಸುಪಾಸಿನಲ್ಲಿರುವ ಸಣ್ಣಪುಟ್ಟ ಗುಡ್ಡಗಳಿಗೂ ಬೆಂಕಿಯ ಕೆನ್ನಾಲಿಗೆ ಬಿಸಿ ತಟ್ಟುವ ಅಪಾಯವಿದೆ. ನರಿ, ಗುಳ್ಳೇನರಿ, ಮೊಲ, ಕರಡಿ, ಚಿರತೆ, ಹೆಬ್ಬಾವು, ಸಾಂಬಾರ್ ಜಿಂಕೆ, ತೋಳ, ಕಾಡುಹಂದಿ, ಮುಳ್ಳುಹಂದಿ, ಹಲವು ಬಗೆಯ ಉರಗ ಪ್ರಾಣಿಗಳಿವೆ. ಮುನಿಯ, ಮುಂಗಟೆಹಕ್ಕಿ, ಬುಲ್ ಬುಲ್, ಕಾಜಾಣ, ಕೋಗಿಲೆ, ಗಿಳಿ, ರಣಹದ್ದು, ಗರುಡ ಒಳಗೊಂಡಂತೆ ನೂರಾರು ಪಕ್ಷಿ ಸಂಕುಲ ನೆಲೆಸಿವೆ. ಬನ್ನಿ, ಬಿಳಿಸುಲಿಗೆ ಜಾಲ್ದಾರಿ, ಮುತ್ತುಗ,ಬ್ಯಾಟೆ, ತಂಗಡಿ, ದೇವಧಾರಾ, ಪಾದ್ರಿ, ಕಕ್ಕೆ, ಶ್ರೀಗಂಧ, ಸುರಗಿ ಸುರಹೊನ್ನೆ ಕೆಂಪು, ಬಿಳಿ ಭೂತಾಳೆ ಮರಗಳು ಸಮೃದ್ಧಿಯಾಗಿ ಬೆಳೆದಿವೆ. ಗಿಡಮೂಲಿಕೆಗಳ ತಾಣವೆಂದು ಹೆಗ್ಗಳಿಕೆ ಪಡೆದಿರುವುದರ ಜತೆಗೆ ವನ್ಯಜೀವಿಗಳಿಗೂ ಆಶ್ರಯ ತಾಣವಾಗಿದೆ. ಬೆಟ್ಟದ ತಪ್ಪಲಿನಲ್ಲಿ ಹತ್ತು ಹಲವು ಬಗೆಯ ಸಸ್ಯರಾಶಿ ಹೇರಳ ಪ್ರಮಾಣದಲ್ಲಿವೆ. ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಬೆಂಕಿ ತಡೆಗೆ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಅರಣ್ಯ ಇಲಾಖೆಗೆ ಎದುರಾಗಿದೆ.
ನಾಗಪುರಿಯ ಹಿರೆಕಲ್ ಗುಡ್ಡ ರಾಜಪ್ರಭುತ್ವ, ಪಾಳೆಗಾರರು ಹಾಗೂ ಬ್ರಿಟಿಷರ ನೆಚ್ಚಿನ ತಾಣವಾಗಿತ್ತು ಎನ್ನುವುದಕ್ಕೆ ಅನೇಕ ಕುರುಹುಗಳಿವೆ. ಕೆಂಗಲ್ ಸಿದ್ದೇಶ್ವರ ,ಶಂಕರೇಶ್ವರ, ಬೆಟ್ಟದ ಸಿದ್ದೇಶ್ವರ, ಶ್ರೀನಿವಾಸ ಪದ್ಮಾವತಿ ದೇವಾಲಯಗಳಿವೆ. ಮೈಸೂರು ಒಡೆಯರ ಕಾಲದ ಕೋಟೆ ಮಳೆ, ಬಿಸಿಲು, ಬೆಂಕಿಯ ಝಳಕ್ಕೆ ಶಿಥಿಲಗೊಂಡಿದೆ.ಯುದ್ಧಕ್ಕೆ ಬಳಕೆ ಮಾಡುತ್ತಿದ್ದ ದೊಡ್ಡ ಫಿರಂಗಿಗಳ ಅವಶೇಷಗಳಿವೆ. ಇದಲ್ಲದೆ ಚಿತ್ರದುರ್ಗದ ಮದಕರಿ ನಾಯಕ ದೊಡ್ಡ ತಿರುಪತಿಗೆ ಹೋಗುವ ಮಾರ್ಗಮಧ್ಯೆ ವಿರಮಿಸಿದ್ದು, ಬೆಟ್ಟದ ಮೇಲೆ ಶ್ರೀ ಗೋವಿಂದರಾಜದವಾಮಿ ದೇಗುಲ ಕಟ್ಟಿಸಿದ್ದನು ಎನ್ನುವ ಮಾತು ಚಾಲ್ತಿಯಲ್ಲಿದೆ. ಬ್ರಿಟಿಷ್ ಅಧಿಕಾರಿಗಳು ನಾಗಪುರಿ ಅರಣ್ಯವನ್ನು ಮೋಜಿನ ವಿಹಾರ ತಾಣವನ್ನಾಗಿ ಮಾಡಿಕೊಂಡಿದ್ದು ನೂರಾರು ವರ್ಷಗಳ ಹಿಂದೆ ಕಟ್ಟಿಸಿರುವ ಬಂಗಲೆ ಪದೇ ಪದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಅವಶೇಷದ ಅಂಚಿಗೆ ಬಂದು ನಿಂತಿದೆ.
ಗುಡ್ಡಗಾಡಿನ ಸರಹದ್ದಿನಲ್ಲಿರುವ ಕಾರೇಹಳ್ಳಿ, ಸಿದ್ದರಹಳ್ಳಿ, ಬೊಮ್ಮೇನಹಳ್ಳಿ, ಅಗ್ಗುಂದ, ಕಾರೆಹಳ್ಳಿ, ಕ್ಯಾತನಹಳ್ಳಿ ಶಂಕರನಹಳ್ಳಿ, ಕ್ಯಾತನಹಳ್ಳಿ, ಪುರ‌್ಲೇಹಳ್ಳಿ, ಕೋಡಿಹಳ್ಳಿ, ದೇಶಾಣಿ, ಜನ್ನಾವರ, ಹಿರಿಸಾದರಹಳ್ಳಿ, ಕಲ್ಗುಂಡಿ ಒಳಗೊಂಡಂತೆ ಹತ್ತಾರು ಹಳ್ಳಿಗಳಿಗೆ ತೆರಳಿ ಬೆಂಕಿಯಿಂದ ಎದುರಾಗಬಹುದಾದ ಅಪಾಯ ಹಾಗೂ ಜೀವವೈವಿಧ್ಯ ರಕ್ಷಿಸುವ ಕುರಿತು ಮನವರಿಕೆ ಮಾಡಿಕೊಡಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕಿದೆ.
ಫೆಬ್ರವರಿ ತಿಂಗಳ ಆರಂಭದಲ್ಲಿಯೇ ಬಿಸಿಲಿನ ಝಳ ತೀವ್ರವಾಗಿದ್ದು ಮಾರ್ಚ್, ಏಪ್ರಿಲ್ ವೇಳೆಗೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಹಿರೇಕಲ್ ಗುಡ್ಡ ಸೇರಿದಂತೆ ಹಲವೆಡೆ ಅಪರೂಪದ ಅರಣ್ಯ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಅರಣ್ಯ ಇಲಾಖೆ ಅಗತ್ಯ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಗುಡ್ಡಕ್ಕೆ ಬೆಂಕಿ ಬಿದ್ದರೆ ಸಂಭವನೀಯ ಅಪಾಯದ ಕುರಿತು ಅರಿವು ಮೂಡಿಸಲು ನಾಗರಿಕರು ಸಂಘ-ಸಂಸ್ಥೆಗಳು, ಚುನಾಯಿತ ಜನಪ್ರತಿನಿಧಿಗಳು ಇಲಾಖೆ ಅಧಿಕಾರಿಗಳಿಗೆ ಸಾಥ್ ನೀಡಬೇಕಿದೆ.
ಕವಿತಾ ಅಗ್ಗುಂದ ಗ್ರಾಪಂ ಅಧ್ಯಕ್ಷೆ ಅರಸೀಕೆರೆ ತಾಲೂಕು
ಬೇಸಿಗೆ ದಿನಗಳು ಸಮೀಪಿಸುತ್ತಿರುವುದರಿಂದ ಅರಣ್ಯ ಹಾಗೂ ಗುಡ್ಡಗಳಿಗೆ ಬೆಂಕಿ ಬೀಳುವ ಸಾಧ್ಯತೆಯಿದ್ದು ಇಲಾಖೆ ಅಗತ್ಯ ಕ್ರಮ ಕೈಗೊಳಲು ಸಿದ್ಧತೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಹಿರೇಕಲ್ ಗುಡ್ಡದ ಆಸುಪಾಸಿನ ಜನರಿಗೆ ಸಿಬ್ಬಂದಿ ಜತೆ ತೆರಳಿ ಅರಿವು ಮೂಡಿಸಲಾಗುತ್ತದೆ.
ಹೇಮಂತ್ ವಲಯ ಅರಣ್ಯಾಧಿಕಾರಿ, ಅರಸೀಕೆರೆ
ಹಿರೇಕಲ್ ಗುಡ್ಡ ಸೇರಿದಂತೆ ವಿವಿಧೆಡೆ ಇರುವ ಇಂತಹ ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಪತ್ತಿನ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಸಂಭವನೀಯ ಬೆಂಕಿ ಅಪಾಯ ತಡೆಯಲು ಅರಣ್ಯ ಇಲಾಖೆ ಜತೆಗೆ ಕೈ ಜೋಡಿಸೋಣ.
ಡಾ.ಹರೀಶ್‌ಕುಮಾರ್ ಪರಿಸರ ಪ್ರೇಮಿ, ಅರಸೀಕೆರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net