ಉತ್ತಮ ಫಲಿತಾಂಶ ಗಳಿಸಿ ಶಾಲೆಗೆ ಗೌರವ ತನ್ನಿ

ಅರಕಲಗೂಡು ತಾಲೂಕು ಕೊಣನೂರಿನ ಎಂಕೆಎಸ್ ಲಯನ್ಸ್ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಗುಂಪು ಅಧ್ಯಯನ ಕಾರ್ಯಾಗಾರವನ್ನು ಬಿಇಒ ಕೆ.ಪಿ.ನಾರಾಯಣ ಉದ್ಘಾಟಿಸಿದರು. ಜಯಣ್ಣ, ಜಗದೀಶ್, ನಾಗರಾಜು, ಅಬುಬೂಕರ್ ಇತರರಿದ್ದರು.
ಅರಕಲಗೂಡು ತಾಲೂಕು ಕೊಣನೂರಿನ ಎಂಕೆಎಸ್ ಲಯನ್ಸ್ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಗುಂಪು ಅಧ್ಯಯನ ಕಾರ್ಯಾಗಾರವನ್ನು ಬಿಇಒ ಕೆ.ಪಿ.ನಾರಾಯಣ ಉದ್ಘಾಟಿಸಿದರು. ಜಯಣ್ಣ, ಜಗದೀಶ್, ನಾಗರಾಜು, ಅಬುಬೂಕರ್ ಇತರರಿದ್ದರು.
Published on
ಅರಕಲಗೂಡು: ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ಗುಂಪು ಅಧ್ಯಯನ ಕಾರ್ಯಾಗಾರಗಳನ್ನು ಕೈಗೊಂಡು ಕಲಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ ಕಿವಿಮಾತು ಹೇಳಿದರು.
ತಾಲೂಕಿನ ಕೊಣನೂರು ಎಂಕೆಎಸ್ ಲಯನ್ಸ್ ವಿದ್ಯಾನಿಕೇತನ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿಗಳ ಗುಂಪು ಅಧ್ಯಯನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 10ನೇ ತರಗತಿ ವಾರ್ಷಿಕ ಫಲಿತಾಂಶವನ್ನು ಗುಣಾತ್ಮಕವಾಗಿಸಲು ತಾಲೂಕಿನ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಬಿಇಒ ಕಚೇರಿ ಸಹಯೋಗದೊಂದಿಗೆ ಈ ವಿಶೇಷ ಕಾರ್ಯಾಗಾರವನ್ನು ಪ್ರಾರಂಭಿಸಿದ್ದೇವೆ. ನಿಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿರುವ ಶಾಲೆಗೆ ಗೌರವದ ಕಾಣಿಕೆಯನ್ನು ನಿಮ್ಮ ಫಲಿತಾಂಶದ ಮೂಲಕ ನೀಡಲು ಸಜ್ಜಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶೈಕ್ಷಣಿಕವಾಗಿ ಸುಧಾರಣೆ ತರುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳನ್ನು ನಡೆಸುತ್ತಿದ್ದೇವೆ. ಕಳೆದ ವರ್ಷ ನಮ್ಮೆಲ್ಲರ ಪ್ರಯತ್ನದಿಂದಾಗಿ ತಾಲೂಕನ್ನು ಜಿಲ್ಲೆಯಲ್ಲಿ 3ನೇ ಸ್ಥಾನಕ್ಕೆ ತರಲಾಗಿದ್ದು, ಮೊದಲನೇ ಸ್ಥಾನಗಳಿಸುವ ನಿಟ್ಟಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಮನೆ ಮನೆ ಭೇಟಿ, ವಿಶೇಷ ಪರೀಕ್ಷೆಗಳು ಸೇರಿದಂತೆ ಹತ್ತು ಹಲವು ವಿನೂತನ ಪ್ರಯತ್ನಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಸಿದ್ಧಪಡಿಸಿಕೊಂಡಿರುವ ಎಲ್ಲ ವಿಷಯಗಳ ಪ್ರತಿ ಪಾಠದ ನೀಲಿ ನಕ್ಷೆಯ ಮೂಲಕ ಅಭ್ಯಾಸಕ್ಕೆ ಅನಕೂಲವಾಗುವ ಸಲಹೆಗಳನ್ನು ನೀಡಲಾಗುತ್ತಿದೆ. ಗುಂಪು ಅಧ್ಯಯನ ತಂಡದ ನಾಯಕರಾಗಿರುವ ನೀವು, ನಿಮ್ಮ ತಂಡದಲ್ಲಿರುವ ಸಹಪಾಠಿಗಳನ್ನು ಕಲಿಕೆಗೆ ಪ್ರೇರಿಪಿಸಿ ಅವರೂ ಹೆಚ್ಚಿನ ಅಂಕಗಳನ್ನು ಪಡೆಯುವಂತಾಗಬೇಕು. ಶೇ.100 ಫಲಿತಾಂಶ ಗಳಿಸಬೇಕು ಎಂಬುದು ಈ ಕಾರ್ಯಗಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಶೈಕ್ಷಣೆಕ ಸಾಲಿನ ಪ್ರಾರಂಭದಿಂದಲೂ ಕ್ರೀಡಾ, ಸಾಂಸ್ಕೃತಿಕ, ಪ್ರವಾಸ ಸೇರಿದಂತೆ ವಿಭಿನ್ನ ಚಟುವಟಿಕೆಗಳ ಭಾಗವಾಗಿದೆ. ಉಳಿದಿರುವ 3 ತಿಂಗಳು ಎಲ್ಲವನ್ನೂ ಬದಿಗೊತ್ತಿ ಓದಿನಲ್ಲಿ ತೊಡಗಿದಲ್ಲಿ ಉತ್ತಮ ಫಲಿತಾಂಶದ ಜತೆಗೆ ನೀವು ಕಲಿತ ಶಾಲೆಗೆ ಗೌರವ ಸಲ್ಲಿಸಿದಂತಾಗಲಿದೆ ಎಂದರು.
ಸರ್ಕಾರಿ ಪ್ರೌಢಶಾಲೆ ಬಿದರೂರಿನ ಮುಖ್ಯ ಶಿಕ್ಷಕ ಜಯಣ್ಣ ಮತ್ತು ಬಿವಿಎಂ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ್ ಮಾತನಾಡಿದರು. ಇಸಿಒ ನಾಗರಾಜು, ಸಿಆರ್‌ಪಿ ಕುಮಾರ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಬುಬಕರ್, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಸುಬ್ರಮಣ್ಯ, ಮುಖ್ಯ ಶಿಕ್ಷಕಿ ಎ.ಸಿ.ಶೈಲಜಾ , ವಿವಿಧ ಶಾಲೆಗಳ ಶಿಕ್ಷಕರು, ಸಂಪನ್ಮೂಲ ವ್ಯಕ್ತಿ ನಿರಂಜನ್, ಜ್ಯೋತಿ, ನವೀನ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net