ಅಪಘಾತಗಳಿಗೆ ಚಾಲಕರ ನಿರ್ಲಕ್ಷ್ಯ ಕಾರಣ

ಬೇಲೂರು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಸಕಲೇಶಪುರ ಮೋಟಾರು ವಾಹನ ನಿರೀಕ್ಷಕ ಆಲಿಯುದ್ದೀನ್ ಅವರನ್ನು ಅಭಿನಂದಿಸಲಾಯಿತು. ಡಾ.ಚಂದ್ರಮೌಳಿ, ಪ್ರಭಾಕರ್, ಹೇಮಂತ್, ಸುರೇಶ್, ಸಂತೋಷ್, ಆದರ್ಶ್ ಇದ್ದರು.
ಬೇಲೂರು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಸಕಲೇಶಪುರ ಮೋಟಾರು ವಾಹನ ನಿರೀಕ್ಷಕ ಆಲಿಯುದ್ದೀನ್ ಅವರನ್ನು ಅಭಿನಂದಿಸಲಾಯಿತು. ಡಾ.ಚಂದ್ರಮೌಳಿ, ಪ್ರಭಾಕರ್, ಹೇಮಂತ್, ಸುರೇಶ್, ಸಂತೋಷ್, ಆದರ್ಶ್ ಇದ್ದರು.
Published on
ಬೇಲೂರು :ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದಕ್ಕೆ ಚಾಲಕರ ನಿರ್ಲಕ್ಷ್ಯ ಮತ್ತು ಏಕಾಗ್ರತೆಯ ಕೊರತೆಯೇ ಮುಖ್ಯ ಕಾರಣ ಎಂದು ಸಾರಿಗೆ ಇಲಾಖೆಯ ಸಕಲೇಶಪುರ ಮೋಟಾರ್ ವಾಹನ ನಿರೀಕ್ಷಕ ಆಲಿ ಉದ್ದೀನ್ ಹೇಳಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಲಯನ್ಸ್ ಸಂಸ್ಥೆಯಿಂದ ಬುಧವಾರ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪಘಾತಗಳಿಗೆ ರಸ್ತೆ, ವಾಹನ ಮತ್ತು ಚಾಲಕ ಎಂಬ ಮೂರು ಅಂಶಗಳು ಕಾರಣವಾಗುತ್ತವೆ. ಆದರೆ ಶೇ.99 ರಷ್ಟು ಅಪಘಾತಗಳು ಚಾಲಕರ ತಪ್ಪಿನಿಂದಲೇ ಸಂಭವಿಸುತ್ತವೆ. ರಸ್ತೆ ದೋಷ ಅಥವಾ ವಾಹನದ ತಾಂತ್ರಿಕ ಸಮಸ್ಯೆಗಳು ಅತಿ ಕಡಿಮೆ ಪ್ರಮಾಣದಲ್ಲಿ ಕಾರಣವಾಗುತ್ತವೆ. ಚಾಲಕರು ವಾಹನಗಳನ್ನು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ, ಸಾರಿಗೆ ನಿಯಮ ಉಲ್ಲಂಘನೆ ಹಾಗೂ ಬೇಜವಾಬ್ದಾರಿತನದಿಂದ ಅಪಘಾತಗಳು ಹೆಚ್ಚುತ್ತಿವೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು ಕಾನೂನು ಬಾಹಿರವಾಗಿದ್ದು, ಕೈಯಲ್ಲಿಡಿದು ಕೊಂಡಿರುವುದೇ ಶಿಕ್ಷಾರ್ಹ ಅಪರಾಧ. ಅಲ್ಲದೆ ರಸ್ತೆ ಸುರಕ್ಷತೆಗೆ ಶಿಸ್ತು, ತಾಳ್ಮೆ ಮತ್ತು ನಿಯಮ ಪಾಲನೆ ಅಗತ್ಯವಾಗಿದ್ದು, ರಸ್ತೆ ಸೂಚನಾ ಫಲಕಗಳನ್ನು ಗಮನಿಸಿ ಚಾಲನೆ ಮಾಡಬೇಕು ಎಂದರು.
ಲಯನ್ಸ್ ಸಂಸ್ಥೆ ಅಧ್ಯಕ್ಷೆ ತಾರಾಮಣಿ ಸುರೇಶ್ ಮಾತನಾಡಿ, ರಸ್ತೆ ಸುರಕ್ಷತೆಯನ್ನು ಸಮಾಜದ ಮಹತ್ವದ ಸಾಮಾಜಿಕ ಆರೋಗ್ಯ ಎಂದು ಬಣ್ಣಿಸಿದರು. ನನ್ನ ವಾಹನ, ನನ್ನ ಇಷ್ಟ ಎಂಬ ಮನೋಭಾವವನ್ನು ಬಿಟ್ಟು, ನಮ್ಮ ತಪ್ಪಿನಿಂದ ಇತರರಿಗೆ ಅಪಾಯವಾಗಬಾರದು ಎಂಬ ಜವಾಬ್ದಾರಿ ಎಲ್ಲರಲ್ಲೂ ಇರಬೇಕು. ಜತೆಗೆ ಪಾಲಕರ ಜವಾಬ್ದಾರಿ ಅರಿತು 18 ವರ್ಷ ಪೂರ್ಣಗೊಳ್ಳುವ ಮೊದಲೇ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಬಾರದು. ಚಾಲನಾ ಪರವಾನಗಿ ಪಡೆದ ನಂತರ ಮಾತ್ರ ವಾಹನ ಬಳಸಲು ಅವಕಾಶ ನೀಡಬೇಕು ಹಾಗೂ ಬೈಕ್ ಚಾಲನೆ ಸಂದರ್ಭ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಬೇಕು ಎಂದರು.
ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಕಾವೇರಿ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಚಂದ್ರಮೌಳಿ ಮಾತನಾಡಿ, ರಸ್ತೆ ಸುರಕ್ಷತೆ ಕುರಿತು ಇನ್ನಷ್ಟು ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ನಿಯಮ ಪಾಲನೆ ಮಾಡದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಪೊಲೀಸ್ ಇಲ್ಲದಿದ್ದರೂ ಕಾನೂನು ಪಾಲನೆ ಮಾಡಬೇಕೆಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಲಯನ್ಸ್ ಸಂಸ್ಥೆಯ ಪ್ರಭಾಕರ್, ಹೇಮಂತ್, ಸುರೇಶ್, ಸಂತೋಷ್, ಆದರ್ಶ್, ಅಬ್ದುಲ್ ಲತೀಫ್, ಪ್ರಶಾಂತ್, ಗೆಂಡೆಹಳ್ಳಿ ಚೇತನ್, ಮೀಸೆ ಮಹೇಶ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net