ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ

ಸಕಲೇಶಪುರ ತಾಲೂಕಿನ ಕೆರೋಡಿ ಗ್ರಾಮದಲ್ಲಿರುವ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ನೂತನ ದೇವರುಗಳ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿಶ್ರೀಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.
ಸಕಲೇಶಪುರ ತಾಲೂಕಿನ ಕೆರೋಡಿ ಗ್ರಾಮದಲ್ಲಿರುವ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ನೂತನ ದೇವರುಗಳ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿಶ್ರೀಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ
  • ಕೆರೋಡಿ ಗ್ರಾಮದಲ್ಲಿ ಗೋಪಾಲಸ್ವಾಮಿ ಸ್ವಾಮಿ ದೇವಸ್ಥಾನದಲ್ಲಿ ದೇವರುಗಳ ಪ್ರತಿಷ್ಠಾಪನಾ ಕಾರ್ಯಕ್ರಮ
ಸಕಲೇಶಪುರ: ಕಾಡಾನೆ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಕೆರೋಡಿ ಗ್ರಾಮದಲ್ಲಿರುವ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ನೂತನ ದೇವರುಗಳ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂತಿಮ ದಿನವಾದ ಗುರುವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಭಾಗದಲ್ಲಿ ಕಾಡಾನೆ ಮತ್ತು ಮನುಷ್ಯರ ನಡುವಿನ ಸಂಘರ್ಷ ಸಾಮಾನ್ಯವಾಗಿದ್ದು, ಇದರಿಂದ ಹಲವು ಕುಟುಂಬಗಳಲ್ಲಿ ಸಾವು-ನೋವು ಸಂಭವಿಸುತ್ತಿವೆ. ಕಾಡಾನೆ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದರು.
2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಡಾನೆ ಸಮಸ್ಯೆ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಬಿಡುಗಡೆ ಮಾಡಿದ್ದೆ. ನಂತರ ಆಡಳಿತ ನಡೆಸಿದವರು ಈ ಕುರಿತು ಸಮರ್ಪಕ ಗಮನಹರಿಸದ ಕಾರಣ ಸಮಸ್ಯೆ ಬಗೆಹರಿಯಲಿಲ್ಲ. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಒಂದು ಸಾವು ಸಂಭವಿಸಿರುವುದು ಬೇಸರದ ಸಂಗತಿ. ಈ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಸಚಿವರೊಂದಿಗೆ ಸಮಸ್ಯೆ ಪರಿಹಾರ ಕುರಿತು ಚರ್ಚೆ ನಡೆಸಿದ್ದೇನೆ ಎಂದರು.
2021ರಲ್ಲಿ ಅರಣ್ಯ ಇಲಾಖೆಯವರು ಕಾಡಾನೆ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದು, ಯಾವ ರೀತಿಯಲ್ಲಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂಬ ನಿಟ್ಟಿನಲ್ಲಿ ಆ ವರದಿಯನ್ನು ಪರಿಶೀಲಿಸುತ್ತಿದ್ದೇನೆ. ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕುವಂತಾಗಲು ಕಾಡಾನೆ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಭಾಗವು ಮುಳುಗಡೆ ಪ್ರದೇಶವಾಗಿದ್ದರೂ ಸೂಕ್ತ ಪರಿಹಾರ ನೀಡಲಾಗಿಲ್ಲ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹೇಳುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಆ ಸಂದರ್ಭದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪರಿಶೀಲಿಸಿ, ಪರಿಹಾರ ಸಿಗದವರಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಕಾಫಿ ಬೆಳೆಗಾರರ ತೋಟಗಳನ್ನು ಆನ್‌ಲೈನ್ ಮೂಲಕ ಹರಾಜು ಮಾಡುವ ಸರ್ಫೆಸಿ ಕಾಯ್ದೆ ಜಾರಿಯಲ್ಲಿದ್ದು, ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಇದಕ್ಕೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ತೆಂಕಲಗೋಡು ಮಠದ ಶ್ರೀಚನ್ನಮಲ್ಲಿಕಾರ್ಜುನ ಸ್ವಾಮೀಜಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಕೆ.ಕೆಂಚೇಗೌಡ, ದೇವಸ್ಥಾನದ ಕಾರ್ಯದರ್ಶಿ ಯೋಗೇಶ್, ಕೆ.ಎ.ಪ್ರಸನ್ನ, ಕೆ.ಎನ್.ಮೂರ್ತಿಗೌಡ, ಎಂ.ಕೆ.ಮಲ್ಲೇಶ್ ಸೇರಿದಂತೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net