ಸಿಎಂ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಸಚಿವರಾಗಿ ಅರಸೀಕೆರೆ ನಗರಕ್ಕೆ ಮೊದಲ ಬಾರಿ ಪ್ರವೇಶಿಸಿದ ಕೆ.ಎಂ.ಶಿವಲಿಂಗೇಗೌಡರನ್ನು ನಗರದ ಅಯ್ಯಪ್ಪ ಸ್ವಾಮಿ ದೇಗುಲದ ಬಳಿ ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸ್ವಾಗತಿಸಿದರು.
ನೂತನ ಸಚಿವರಾಗಿ ಅರಸೀಕೆರೆ ಪ್ರವೇಶಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡರನ್ನು ಸೋಮವಾರ ಸಂಜೆ ನಗರದ ಅಯ್ಯಪ್ಪ ಸ್ವಾಮಿ ದೇಗುಲದ ಬಳಿ ಜಮಾಯಿಸಿದ್ದ ಸಹಸ್ರಾರು ಕಾರ್ಯಕರ್ತರು ಹಾಗೂ ಮುಖಂಡರು ಬೃಹತ್ ಗಾತ್ರದ ಹಾರ ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಿದರು.
ಕೆ.ಎಂ.ಶಿವಲಿಂಗೇಗೌಡರು ತೆರದ ವಾಹನ ಏರುತ್ತಿದ್ದಂತೆ ಅಭಿಮಾನಿಗಳಿಂದ ಹೂಮಳೆ ಸುರಿಸಲಾಯಿತು. ನೆರದಿದ್ದ ಜನಸ್ತೋಮ ಜಯಘೋಷ ಕೂಗಿ ಸಂಭ್ರಮಿಸಿದರು. ಹಾಸನ, ಮೈಸೂರು ರಸ್ತೆಯಲ್ಲಿ ರೋಡ್ ಶೋ ನಡೆಸಿ ಕೈಬೀಸಿ ಅಭಿಮಾನಿಗಳು ಹಾರೈಕೆ ಸ್ವೀಕರಿಸಿದರು. ರಾಷ್ಟ್ರೀಯ ಹೆದ್ದಾರಿ ಬದಿಗೆ ಹೊಂದಿಕೊಂಡಂತಿರುವ ಡಾ.ಬಿ.ಆರ್. ಅಂಬೇಡ್ಕರ್, ಬಸವೇಶ್ವರ ಹಾಗೂ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಬಿ.ಶಶಿಧರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್. ಅರುಣ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲ, ಮುಖಂಡರಾದ ಬಿಳಿಚೌಡಯ್ಯ, ಗಂಜಿಗೆರೆ ಚಂದ್ರಶೇಖರ್, ಜಿಟಿಎಸ್ ಗೌಸ್ ಖಾನ್, ಜಯಣ್ಣ, ಸಿಕಂದರ್, ವೆಂಕಟೇಶ್ ಸೇರಿದಂತೆ ಹಲವರು ಹಾಜರಿದ್ದರು.
ಸಚಿವರಾದ ಬಳಿಕ ತಾಲೂಕಿಗೆ ಮೊದಲ ಬಾರಿಗೆ ಭೇಟಿ ನೀಡಿದ ಕೆ.ಎಂ.ಶಿವಲಿಂಗೇಗೌಡರನ್ನು ಇದಕ್ಕೂ ಮುನ್ನ ತಾಲೂಕಿನ ಬೆಳಗುಂಬ ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಿದ್ದರು. ವಾಹನ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಮಾರ್ಗ ಬದಲಾವಣೆ ಮಾಡಲಾಗಿತ್ತು. ಹಾಸನ ಹಾಗೂ ಬಿ. ಎಚ್. ರಸ್ತೆಯ ಇಕ್ಕೆಲಗಳಲ್ಲಿ ಫ್ಲೆಕ್ಸ್‌ಗಳ ಮಹಾಪೂರವೇ ಕಾಣುತ್ತಿತ್ತು.