ಮದುವೆಯಾದ ನಂತರ ಪತಿ ನಂಜುಂಡೇಗೌಡರೊಂದಿಗೆ ಕೃಷಿ ಕಾಯಕಕ್ಕೆ ಕೈಜೋಡಿಸಿದ ಶಶಿರೇಖಾ ಅವರು, ಬರಡು ಭೂಮಿಯಲ್ಲಿನ ಕಲ್ಲುಗಳನ್ನು ತೆಗೆದು ಕೃಷಿಗೆ ಮುಂದಾದರು. ಆದರೆ ಜಮೀನಿನಲ್ಲಿನ ಮಣ್ಣು ಸತ್ವ ಕಳೆದುಕೊಂಡಿದೆ ಎಂಬುದು ತಿಳಿದ ಬಳಿಕ ಹೊಲಕ್ಕೆ ಕೆರೆ ಮಣ್ಣು ಹಾಕಿಸಿದರು. ಇದಾದ ಬಳಿಕ ಹಾಸನದ ಕೃಷಿ ವಿಶ್ವವಿದ್ಯಾಲಯ, ಕೃಷಿ, ತೋಟಗಾರಿಕೆ ವಿವಿ ವಿಜ್ಞಾನಿಗಳಿಂದ ಮಾಹಿತಿ ಪಡೆಯಲು ಆರಂಭಿಸಿದರು. ಇದೀಗ ಒಟ್ಟು 5 ಎಕರೆ ಪ್ರದೇಶದಲ್ಲಿ ಬಹು ಬೆಳೆಗಳನ್ನು ಬೆಳೆಯುವ ಮೂಲಕ ಲಾಭ ಗಳಿಸಿದ್ದಾರೆ. ಜಮೀನಿನಲ್ಲಿ ಎರಡು ಕೊಳವೆ ಬಾವಿಯಿದ್ದು, ಅಡಕೆ, ತೆಂಗು, ಬಾಳೆ, ತೇಗ, ಸಿಲ್ವರ್, ಬೇವು, ಸಪೋಟ, ಸೀಬೆ, ಮಾವು, ಶುಂಠಿ, ಕಬ್ಬು, ರಾಗಿ, ಏಲಕ್ಕಿ, ಕಾಳು ಮೆಣಸು, ವೀಳ್ಯದೆಲೆ ತರಕಾರಿಗಳು, ಸೊಪ್ಪು, ಮೇವಿನ ಹುಲ್ಲು ಬೆಳೆಯುತ್ತಾರೆ.