ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್‌ನ ಹಾಸನ-ಚಿಕ್ಕಮಗಳೂರು ಪ್ರಾದೇಶಿಕ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕೆ.ಎಸ್.ಪ್ರಭಾಕರ್, ರಾಜೇಶ್, ನಾಗರಾಜಾಚಾರ್ ಇತರರು ಇದ್ದರು.
ಬೇಲೂರು: ವಿಶ್ವಕರ್ಮ ಸಮುದಾಯದ ಭವಿಷ್ಯವನ್ನು ಬದಲಾಯಿಸಬಲ್ಲ ಏಕೈಕ ಶಕ್ತಿ ಎಂದರೆ ಶಿಕ್ಷಣ. ಆದ್ದರಿಂದ ಎಲ್ಲರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪ್ರಭಾಕರ್ ಹೇಳಿದರು.
ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್‌ನ ಹಾಸನ-ಚಿಕ್ಕಮಗಳೂರು ಪ್ರಾದೇಶಿಕ ಸಮಿತಿ, ತಾಲೂಕು ವಿಶ್ವಕರ್ಮ ಸಮಾಜದಿಂದ ಪಟ್ಟಣದ ಕಾಫಿ ಬೆಳೆಗಾರರ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನಲ್ಲಿ ಬದಲಾಗದ ಒಂದು ನೀತಿ ಎಂದರೆ ಅದು ಶಿಕ್ಷಣ. ಈ ಕ್ಷೇತ್ರದಲ್ಲಿನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಜತೆಗೆ ಆರ್ಥಿಕ ಪರಿಸ್ಥಿತಿ, ಕುಟುಂಬದ ಹಿನ್ನೆಲೆ, ಸವಾಲುಗಳು ಏನಾದರೂ ಇದ್ದರೂ ಅದನ್ನು ಮೀರಿ ಎದ್ದು ನಿಲ್ಲುವುದಕ್ಕೆ ಶಿಕ್ಷಣವೇ ಅತ್ಯಂತ ಬಲವಾದ ಅಸ್ತ್ರ. ನಮ್ಮ ಸಮುದಾಯವು ಶತಮಾನದ ಹಿಂದೆ ಕೈಗಾರಿಕೆ, ಕಲೆ-ಕೌಶಲಗಳಲ್ಲಿ ಹೆಸರು ಮಾಡಿತ್ತು. ಇಂದಿನ ಕಾಲದಲ್ಲಿ ಆ ಪರಂಪರೆಯ ಜತೆಗೆ ತಂತ್ರಜ್ಞಾನ, ವಿಜ್ಞಾನ, ನಿರ್ವಹಣಾ ಕೌಶಲಗಳನ್ನೂ ಅಳವಡಿಸಿಕೊಂಡರೆ ನಾವು ಹಿಂದೆ ತಿರುಗಿ ನೋಡ ಬೇಕಾಗುವುದಿಲ್ಲ. ಯುವಕರು ಗುರಿಯೊಂದಿಗೆ ಸಾಧನೆಗೆ ಮುಂದಾದರೆ ಅಸಾಧ್ಯ ಎಂಬುದೇ ಇಲ್ಲ. ನೀವು ಯಾವ ವೃತ್ತಿಗೆ ಹೋಗಬೇಕು, ಐದು ವರ್ಷಗಳಲ್ಲಿ ಎಲ್ಲಿರಬೇಕು, ಸಮಾಜಕ್ಕೆ ಏನು ಕೊಡುಗೆ ನೀಡಬೇಕು ಎಂಬುದನ್ನು ಈಗಲೇ ನಿರ್ಧರಿಸಬೇಕು. ಪ್ರತಿದಿನ ಸಮಯವನ್ನು ಓದಿಗೆ, ವ್ಯಕ್ತಿತ್ವ ವಿಕಾಸಕ್ಕೆ, ಮತ್ತೊಂದು ಭಾಗವನ್ನು ಆರೋಗ್ಯಕ್ಕೆ ಮೀಸಲಿಟ್ಟು ಮುಂದೆ ಸಾಗಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ವಿರಾಟ್ ವಿಶ್ವ ಗ್ಲೋಬಾಲ್ ಅಧ್ಯಕ್ಷ ಹಾಗೂ ಹೈಕೋರ್ಟ್ ವಕೀಲ ರಾಜೇಶ್ ಮಾತನಾಡಿ, ಉನ್ನತ ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು. ಮತ್ತು ಪಾಲಕರು ಸಹ ತಮ್ಮ ಮಕ್ಕಳಿಗೆ ಮೊದಲು ಸಂಸ್ಕಾರದ ಜತೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ಇದಕ್ಕಾಗಿ ನಮ್ಮ ಸಮಾಜದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಉಚಿತ ವಸತಿ ನಿಲಯ ಸ್ಥಾಪಿಸಿದ್ದು ಇದರ ಸದುಪಯೋಗ ಪಡೆಯಬೇಕು. ಇದರೊಂದಿಗೆ ಉನ್ನತ ಶಿಕ್ಷಣಕ್ಕೆ ಮುಂದಾಗುವ ಸಮಾಜದ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಕಾರ ನೀಡುವುದಾಗಿ ಹೇಳಿದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪುರುಷೋತ್ತಮಾಚಾರ್ ಮಾತನಾಡಿ, ವಿದ್ಯಾಭ್ಯಾಸ ಎಂಬುದು ಕೇವಲ ಪರೀಕ್ಷೆಯಲ್ಲಿ ಪಾಸಾಗುವುದಲ್ಲ. ವ್ಯಕ್ತಿತ್ವ ಬೆಳವಣಿಗೆ, ಸಮಾಜದ ಹೊಣೆಗಾರಿಕೆ ಮತ್ತು ನಾಯಕತ್ವದ ಗುಣ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳಿಗೆ ಕೇವಲ ಸಾಂಪ್ರದಾಯಿಕ ವಿದ್ಯೆ ಸಾಲದು. ತಂತ್ರಜ್ಞಾನ, ಸಂವಹನ ಹಾಗೂ ಸೃಜನಶೀಲತೆಯ ಪರಿಣತಿಯನ್ನು ಅಳವಡಿಸಿಕೊಳ್ಳಬೇಕಿದೆ. ಈ ರೀತಿ ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಹೊರ ಹೊಮ್ಮಲು ಪಾಲಕರು, ಸಮುದಾಯ ಸಂಘಟನೆಗಳು ಕೈಜೋಡಿಸಬೇಕು ಎಂದರು.
ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿಶ್ವಕರ್ಮ ಸಮಾಜದಿಂದ ಪ್ರೋತ್ಸಾಹಧನ ನೀಡಿ ಅಭಿನಂದಿಸಲಾಯಿತು.
ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್ ಆರ್ಥಿಕ ತಜ್ಞ ನಾಗರಾಜಾಚಾರ್, ಸಮಾಜದ ಮುಖಂಡ ಭೋಗಾಚಾರ್, ವಿನಾಯಕಚಾರ್, ಕೋಕಿಲ, ಜಗದೀಶ್, ಕುಮಾರ್, ಹರೀಶ್, ರತ್ನಾಚಾರ್, ವೆಂಕಟೇಶ್, ಮೀನಾಕ್ಷಿ, ಹಿತೇಶ್ ಸಚಾನಿಯಾ, ಉಮೇಶ್ ಸೇರಿದಂತೆ ಇತರರಿದ್ದರು.