ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಮಹೋತ್ಸವ

-ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ರಾಮಾನುಜರ ಮೂರ್ತಿಗೆ ಪೂಜೆ ಸಲ್ಲಿಸಿರುವ ಅರ್ಚಕರು
-ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ರಾಮಾನುಜರ ಮೂರ್ತಿಗೆ ಪೂಜೆ ಸಲ್ಲಿಸಿರುವ ಅರ್ಚಕರು
Published on
ಬೇಲೂರು : ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಶ್ರೀ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಮಹೋತ್ಸವವು ಬುಧವಾರ ಭಕ್ತರ ಸಮ್ಮುಖದಲ್ಲಿ ವಿಶೇಷವಾಗಿ ನೆರವೇರಿತು.
ಶ್ರೀ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮಾನುಜಾಚಾರ್ಯರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ವೈಷ್ಣವ ಸಂಪ್ರದಾಯದ ಆಚರಣೆಗಳೊಂದಿಗೆ ವೇದಘೋಷ ಮತ್ತು ಭಕ್ತರ ಜಯ ಘೋಷಗಳ ನಡುವೆ ಸಾಗಿತು.
ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟರ್ ಮಾತನಾಡಿ, ಭಗವದ್ಗೀತೆಯ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಆಚಾರ್ಯರಾದ ಶ್ರೀಮದ್ ರಾಮಾನುಜರ 1008ನೇ ತಿರುನಕ್ಷತ್ರವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಬೆಳಗ್ಗೆ ಇಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು, ಶ್ರೀ ವೈಷ್ಣವ ಸಂಪ್ರದಾಯದಂತೆ ರಮಣಿಗಳಿಗೆ ಸಂಭಾವನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಶುದ್ಧ ಪುಣ್ಯಾಹಾಚರಣೆಯ ನಂತರ ಶ್ರೀ ರಾಮಾನುಜರ ಅಭಿಷೇಕ ಹಾಗೂ ಆಂತರಂಗಿಕ ಅಭಿಷೇಕಗಳು ನೆರವೇರಿದವು. ಬಳಿಕ ಅಲಂಕಾರ, ಚಾತುರ್ಮಾಸ್ಯ ವಿಧಿಗಳು, ಮಹಾ ನೈವೇದ್ಯ ಸಮರ್ಪಣೆ ನಡೆದು ಮಹಾ ಮಂಗಳಾರತಿಯೊಂದಿಗೆ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಇದೇ ಸಂದರ್ಭ ಶ್ರೀ ವರದರಾಜಸ್ವಾಮಿ ಹಾಗೂ ಶ್ರೀ ರಾಮಾನುಜರ ಸಂಪ್ರದಾಯದಂತೆ ವಿಶೇಷ ಉತ್ಸವಗಳು ನಡೆಯುತ್ತಿದ್ದು, ಸಮಸ್ತ ಭಕ್ತರಿಗೆ ಅನುಗ್ರಹ ದೊರಕಲೆಂದು ಶ್ರೀಚನ್ನಕೇಶವನಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಮತ್ತು ರಾತ್ರಿ ದೇವರ ಉತ್ಸವದೊಂದಿಗೆ ರಾಮಾನುಜರ ಉತ್ಸವವು ನಡೆಯಲಿದೆ ಎಂದರು.
ಅರ್ಚಕ ನರಸಿಂಹ ಪ್ರಿಯ ಭಟ್ಟರ್ ಮಾತನಾಡಿ, ಈ ವರ್ಷದ ತಿರುನಕ್ಷತ್ರ ಮಹೋತ್ಸವವು ವಿಶೇಷ ಮಹತ್ವ ಹೊಂದಿದೆ. ಬೆಳಗ್ಗೆ ದೇವಾಲಯದಲ್ಲಿ ಸಂಪ್ರದಾಯಬದ್ಧವಾಗಿ ಎಂಟು ಬೀದಿಯ ಸಂಭಾವನೆ ಉತ್ಸವ ನಡೆಯಿತು. ನಂತರ ಅಭಿಷೇಕ, ಅಲಂಕಾರ, ಶಠಾರಿ ಮಾಲೆ ಮರ್ಯಾದೆಯೊಂದಿಗೆ ದೇವರಿಂದ ಬಹುಮಾನ ಸಮರ್ಪಣೆ ನಡೆಯಲಿದೆ. ವಿಶ್ವವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ನಿರ್ಮಾಣಕ್ಕೆ ಹೊಯ್ಸಳರ ರಾಜ ವಿಷ್ಣುವರ್ಧನನಿಗೆ ಆಜ್ಞೆ ನೀಡಿದವರು ಶ್ರೀ ರಾಮಾನುಜಾಚಾರ್ಯರೇ ಆಗಿರುವುದರಿಂದ ಈ ಮಹೋತ್ಸವವನ್ನು ದೇವಾಲಯದಲ್ಲಿ ಪ್ರತಿವರ್ಷ ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net