ರಕ್ತದಾನದಿಂದ ಮತ್ತೊಂದು ಜೀವ ರಕ್ಷಣೆ

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಡಿಕೇರಿಯ ರಕ್ತನಿಧಿ ಕೇಂದ್ರದ ವೈದ್ಯರಾದ ಕರುಂಬಯ್ಯ ಮಾತನಾಡಿದರು. ಜಮೀರ್, ಉದಯ್, ಲೋಕೇಶ್ ಇತರರು ಇದ್ದರು.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಡಿಕೇರಿಯ ರಕ್ತನಿಧಿ ಕೇಂದ್ರದ ವೈದ್ಯರಾದ ಕರುಂಬಯ್ಯ ಮಾತನಾಡಿದರು. ಜಮೀರ್, ಉದಯ್, ಲೋಕೇಶ್ ಇತರರು ಇದ್ದರು.
Published on
ಸೋಮವಾರಪೇಟೆ: ಮಡಿಕೇರಿ ರಕ್ತನಿಧಿ ಕೇಂದ್ರ, ತಥಾಸ್ತು ಸಾತ್ವಿಕ ಸಂಸ್ಥೆ, ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಯುವ ಘಟಕ ಹಾಗೂ ಮೈಸೂರಿನ ಅಬಕಾರಿ ನಿರೀಕ್ಷಕರ ಕಚೇರಿಗಳ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದಲ್ಲಿ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ ಮಾತನಾಡಿ, ರಕ್ತದಾನದಿಂದ ಇನ್ನೊಂದು ಜೀವವನ್ನು ಉಳಿಸಬಹುದು ಹಾಗೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಯುವ ಜನಾಂಗ ರಕ್ತದಾನಕ್ಕೆ ಮುಂದಾಗಬೇಕು. ರಕ್ತದಾನ ಪವಿತ್ರವಾದ ಕಾರ್ಯವಾಗಿದೆ. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದಾನಿಗಳಿಗೂ ಹೆಚ್ಚಿನ ಪ್ರಯೋಜನವಿದೆ. ರಕ್ತದೊತ್ತಡ ನಿಯಂತ್ರಿಸುವುದರೊಂದಿಗೆ, ರಕ್ತದಲ್ಲಿರುವ ಸಮಸ್ಯೆಗಳನ್ನು ಕಂಡುಕೊಳ್ಳಬಹುದು. ದಾನಿಯಿಂದ ಪಡೆದ ರಕ್ತ ನಾಲ್ಕು ಜನರಿಗೆ ಉಪಯೋಗಕ್ಕೆ ಬರಲಿದ್ದು, ಯುವಜನರು ಯಾವುದೇ ಅಂಜಿಕೆ ಇಲ್ಲದೆ ರಕ್ತದಾನದಲ್ಲಿ ಪಾಲ್ಗೊಳ್ಳಬಹುದು ಎಂದರು.

ರಕ್ತದಾನದ ಬಗ್ಗೆ ಮೂಢನಂಬಿಕೆಗೆ ಬೆಲೆ ನೀಡಬಾರದು. ರಕ್ತ ಪಡೆಯುವಾಗಲು ಕೆಲವೊಂದು ನಿಯಮಗಳಿದ್ದು, ಆರೋಗ್ಯವಂತ 18 ವರ್ಷ ಮೇಲ್ಪಟ್ಟವರು ರಕ್ತದಾನ ಮಾಡಬಹುದು. ದಾನಿಗಳು ರಕ್ತ ನೀಡುವ ಮುನ್ನ ಚೆನ್ನಾಗಿ ನಿದ್ರೆ ಮಾಡಿರಬೇಕು. ಸರಿಯಾದ ಆಹಾರ ಮತ್ತು ನೀರನ್ನು ಕುಡಿದಿರಬೇಕು. ಯಾವುದೇ ಕಾಯಿಲೆಯಿಂದ ಬಳಲುತ್ತಿರಬಾರದು ಮತ್ತು ಔಷಧ ಪಡೆಯುತ್ತಿರಬಾರದು. ರಕ್ತದಾನದ ನಂತರ ದ್ರವ ಆಹಾರವನ್ನು ಹೆಚ್ಚು ಬಳಸಬೇಕು. ಬಿಸಿಲಿನಲ್ಲಿ ಆಟವಾಡಬಾರದು ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಜಮೀರ್ ಆಹಮ್ಮದ್ ಮಾತನಾಡಿ, ತಾಲೂಕು ಕೇಂದ್ರ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ ಇಬ್ಬರು ಸ್ತ್ರೀ ರೋಗ ತಜ್ಞರು ಹಾಗು ಅರಿವಳಿಕೆ ತಜ್ಞರನ್ನು ಸರ್ಕಾರ ನೇಮಕ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ತಿಂಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಸುಮಾರು 100 ಹೆಂಗಸರಿಗೆ ಹೆರಿಗೆ ಮಾಡಿಸುವ ಯೋಜನೆಯಿದ್ದು, ಅಂತಹ ಸಂದರ್ಭಗಳಲ್ಲಿ ನಮ್ಮ ಆಸ್ಪತ್ರೆಗೂ ರಕ್ತದ ಅವಶ್ಯಕತೆ ಇರುತ್ತದೆ. ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಆಯೋಜಿಸುವ ರಕ್ತದಾನ ಶಿಬಿರಗಳಿಂದ ರಕ್ತದ ಕೊರತೆ ನೀಗಿಸಲು ಸಹಕಾರಿಯಾಗಲಿದೆ ಎಂದರು.

ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಹರ್ಷ ಮಾತನಾಡಿ, ಯಾವುದೇ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ಹೆದರಿಕೆ ಬೇಡ. ರಕ್ತದಾನದಿಂದ ಮತ್ತೊಂದು ಜೀವ ಉಳಿಸಿದ ತೃಪ್ತಿ ನಮಗೆ ಸಿಗಲಿದೆ ಎಂದರು.

ಶಿಬಿರದ ಅಧ್ಯಕ್ಷತೆಯನ್ನು ತಥಾಸ್ತು ಸಾತ್ವಿಕ ಸಂಸ್ಥೆಯ ಅಧ್ಯಕ್ಷ ಉದಯ್ ಮಾಳವ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮೈಸೂರಿನ ಅಬಕಾರಿ ಇಲಾಖೆಗೆ ವರ್ಗಾವಣೆಗೊಂಡ ಅಬಕಾರಿ ನಿರೀಕ್ಷಕ ಲೋಕೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net