ನೀರಲ್ಲಿ ಉಸಿರು ಬಿಗಿ ಹಿಡಿದು ಯೋಗ ಮಾಡುವ ಆನಂದ್​ ಸೂರ್ಯ: ವೈರಲ್ ವಿಡಿಯೋ ಹಿಂದಿದೆ 15 ವರ್ಷಗಳ ಶ್ರಮ!

ಸರ್ವಾಂಗಾಸನ ಹಿಂದಿದೆ 15 ವರ್ಷಗಳ ಶ್ರಮ: ವಿಶೇಷ ಪ್ರತಿಭೆ ಮಂಜು - youtube
Published on

ಹಾಸನ: ಜೂನ್​ 21ರ ವಿಶ್ವ ಯೋಗ ದಿನಾಚರಣೆಗೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಠಿಣ ಯೋಗಾಭ್ಯಸದ ವಿಡಿಯೋವೊಂದು ಹರಿದಾಡುತ್ತಿದೆ. ವ್ಯಕ್ತಿಯೊಬ್ಬರು ನದಿಯ ನೀರಿನಲ್ಲಿ ಸರ್ವಾಂಗಾಸನ ಮಾಡಿದ್ದು, ನೋಡುಗರ ಎದೆ ಝಲ್​ ಎನ್ನುವಂತಿದೆ.

ವೈರಲ್​ ವಿಡಿಯೋದಲ್ಲಿರುವವರ ಹೆಸರು ಆನಂದ್​ ಸೂರ್ಯ. ಇವರನ್ನು ಊರಲ್ಲಿ ಮಂಜು ಎಂದೇ ಕರೆಯುತ್ತಾರೆ. ವಕೀಲರಾಗಿರುವ ಮಂಜು, ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರ್ ಗ್ರಾಮದ ನಿವಾಸಿ. ಸುಮಾರು 15 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ. ಮೊದಲು ಉಸಿರು ಬಿಗಿ ಹಿಡಿಯುವ ಅಭ್ಯಾಸ ಆರಂಭಿಸಿದ ಮಂಜು, ಮೂರ್ನಾಲ್ಕು ವರ್ಷಗಳಿಂದ ಸರ್ವಾಂಗಾಸನ ಮಾಡುತ್ತಿರುವುದಾಗಿ ವಿಜಯವಾಣಿ ​ ಜತೆ ಮಾಹಿತಿ ಹಂಚಿಕೊಂಡರು.

ರೈತ ಹಾಗೂ ಮಧ್ಯಮ ಕುಟುಂಬದ ಹಿನ್ನೆಲೆಯುಳ್ಳ ಮಂಜು ಅವರಿಗೆ ತಾತ ಮತ್ತು ತಂದೆಯೇ ಸ್ಫೂರ್ತಿ. ಇಬ್ಬರೂ ಶ್ರಮ ಜೀವಿಗಳು. ದೇಹಾರೋಗ್ಯದ ಬಗ್ಗೆ ಕಾಳಜಿ ಉಳ್ಳವರು. ಹೀಗಾಗಿಯೇ ಮಂಜು ಅವರಿಗೂ ವ್ಯಾಯಾಮದ ಆಸೆ ಹುಟ್ಟಿಕೊಂಡಿತು. ಬಹಳ ದಿನಗಳಿಂದ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ.

''ಚಿಕ್ಕಂದಿನಿಂದಲೂ ಆರ್​ಆರ್​ಎಸ್​ ಶಾಖೆಗಳಿಗೆ ಹೋಗುತ್ತಿದ್ದೆ. ಅಲ್ಲಿ ಪ್ರಾಣಾಯಾಮ ಸೇರಿದಂತೆ ಅನೇಕ ವ್ಯಾಯಾಮಗಳನ್ನು ಮಾಡಿಸುತ್ತಿದ್ದರು. ನಮ್ಮ ತಂದೆ ಕೂಡ ಆಳ ಈಜು ಸೇರಿದಂತೆ ಹಲವು ಸಾಹಸಗಳನ್ನು ಮಾಡುವ ಪ್ರವೃತ್ತಿಯನ್ನು ಹೊಂದಿದ್ದರು. ಹೀಗಾಗಿ ನಾನು ಕೂಡ ಯೋಗಾಭ್ಯಾಸ ಆರಂಭಿಸಿದೆ. ಈಗ ನೀರಿನಲ್ಲಿ 2 ನಿಮಿಷಗಳ ಕಾಲ ಸರ್ವಾಂಗಾಸನ ಮಾಡುತ್ತಿದ್ದೇನೆ. 4 ನಿಮಿಷಗಳವರೆಗೆ ಮಾಡಬೇಕೆಂಬುದು ನನ್ನ ಆಸೆ" ಎಂದು ಮಂಜು ಹೇಳಿಕೊಂಡರು.

ಸದ್ಯ ವೈರಲ್​ ಆಗಿರುವ ವಿಡಿಯೋವನ್ನು ಹಾಸನ ಜಿಲ್ಲೆಯ ರಾಮನಾಥಪುರದ ಕಾವೆರಿ ನದಿಯಲ್ಲಿ ಸೆರೆಹಿಡಿಯಲಾಗಿದೆ. ಮಂಜು ಅವರ ಸರ್ವಾಂಗಾಸನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಕರೊನಾ ಸಮಯದಲ್ಲಿ ಉಸಿರಾಟದ ತೊಂದರೆ ಮತ್ತು ಆಮ್ಲಜನಕದ ಬೇಡಿಕೆ ಭಾರಿ ಸುದ್ದಿಯಾಯಿತು. ಆದರೆ, ಈ ರೀತಿಯ ಯೋಗಾಭ್ಯಾಸವನ್ನು ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು ಎನ್ನುತ್ತಾರೆ ಮಂಜು.

ಅಗತ್ಯ ಸವಲತ್ತು ಸಿಕ್ಕರೆ ಇನ್ನು ಹೆಚ್ಚಿನ ಸಾಧನೆ ಮಾಡಲು ಮಂಜು ಅವರು ಬಯಸಿದ್ದಾರೆ. ಅವರ ಈ ಸಾಧನೆ ನಿಮಗೆ ಇಷ್ಟವಾಗಿ ಏನಾದರೂ ಹೇಳಲು ಬಯಸಿದರೆ ನೀವು ಈ ನಂಬರ್​ಗೆ ಕರೆ ಮಾಡಬಹುದು. Mob No- 9964399013 ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net