ಟ್ರಕ್ ಟರ್ಮಿನಲ್ ಗಗನ ಕುಸುಮ

7HSN1
Published on

ಹಾಸನ: ರಾಜ್ಯದ ವಿವಿಧ ಮೂಲೆಗಳಿಂದ ಬರುವ ಸರಕು ಸಾಗಣೆ ಲಾರಿಗಳ ನಿಲುಗಡೆ ಹಾಗೂ ಚಾಲಕ-ಕ್ಲೀನರ್‌ಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲು ಇಲ್ಲಿವರೆಗೂ ಸಾಧ್ಯವಾಗಿಲ್ಲ.

ನಗರದ ರಾಜಘಟ್ಟದಲ್ಲಿರುವ ಸುಮಾರು 12 ಎಕರೆ ವಿಸ್ತಾರದಲ್ಲಿ ನಿತ್ಯ 450 ಲಾರಿಗಳು ನಿಲ್ಲುತ್ತಿದ್ದು ಯಾವುದೇ ವ್ಯವಸ್ಥೆ ಇಲ್ಲವಾಗಿದೆ. ಬಿತ್ತನೆ ಆಲೂಗಡ್ಡೆ, ರಸಗೊಬ್ಬರ, ಆಹಾರ ಧಾನ್ಯಗಳನ್ನು ಹೊರ ರಾಜ್ಯದಿಂದ ತರುವ ಲಾರಿಗಳು ಮೂರ‌್ನಾಲ್ಕು ದಿನಗಳ ವರೆಗೆ ಇಲ್ಲಿಯೇ ನಿಲ್ಲಬೇಕಾಗುತ್ತದೆ. ಆದರೆ ಟ್ರಕ್ ಟರ್ಮಿನಲ್‌ಗೆ ಸ್ವಂತ ಜಾಗವಿಲ್ಲ. ಲಾರಿ ಚಾಲಕ ಹಾಗೂ ಕ್ಲೀನರ್‌ಗಳಿಗೆ ಕುಡಿಯಲು ಹನಿ ನೀರು ಸಿಗುವುದಿಲ್ಲ. ರಾತ್ರಿ ಸಮಯದಲ್ಲಿ ಓಡಾಡಲು ಬೆಳಕಿನ ವ್ಯವಸ್ಥೆ ಇಲ್ಲ. ವಿಶ್ರಾಂತಿ ಗೃಹ, ಶೌಚ ಹಾಗೂ ಸ್ನಾನ ಗೃಹ ವ್ಯವಸ್ಥೆ ದೂರದ ಮಾತಾಗಿದೆ. ನೂರಾರು ಕಿ.ಮೀ. ಲಾರಿ ಓಡಿಸಿಕೊಂಡು ಬರುವ ಚಾಲಕರು ವಾಹನದೊಳಗೆ ಸೊಳ್ಳೆ ಕಚ್ಚಿಸಿಕೊಂಡು ಮಲಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ಬೇಡಿಕೆ ಈಡೇರಿಕೆಗೆ ಲಾರಿ ಮಾಲೀಕರ ಸಂಘ ಸಾಕಷ್ಟು ಬಾರಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

15 ವರ್ಷದಿಂದ ಬದಲಾಗದ ಪರಿಸ್ಥಿತಿ:
ಕಳೆದ 15 ವರ್ಷದಿಂದ ರಾಜಘಟ್ಟದಲ್ಲಿ ಲಾರಿ ನಿಲುಗಡೆ ಪ್ರಕ್ರಿಯೆ ಜಾರಿಯಲ್ಲಿದ್ದು ಆರಂಭದಿಂದ ಇಲ್ಲಿವರೆಗೆ ಪರಿಸ್ಥಿತಿ ಹಾಗೇ ಇದೆ. ಸುತ್ತಲು ಗಿಡಗಂಟಿಗಳು ಬೆಳೆದಿದ್ದು ಕತ್ತಲಾದರೆ ಪುಂಡ ಪೋಕರಿಗಳ ಓಡಾಟ ಹೆಚ್ಚುತ್ತದೆ. ಟರ್ಮಿನಲ್‌ಗೆ ಪೊಲೀಸರ ಭದ್ರತೆ ಇಲ್ಲದ ಕಾರಣ ಡೀಸೆಲ್ ಕಳ್ಳರ ಹಾವಳಿ ಹೆಚ್ಚಿದೆ. ಚಾಲಕ ವಾಹನ ಬಿಟ್ಟು ಬೇರೆ ಎಲ್ಲಿಗಾದರೂ ಹೋದರೆ ಅವಘಡ ಕಟ್ಟಿಟ್ಟ ಬುತ್ತಿ. ಕುಡಿದ ಮತ್ತಲ್ಲಿ ಲಾರಿ ಗಾಜಿಗೆ ಕಲ್ಲು ಎಸೆಯುವ ಘಟನೆಗಳು ಮರುಕಳಿಸುತ್ತಿವೆ. ಕ್ಯಾಂಟೀನ್ ವ್ಯವಸ್ಥೆ ಇಲ್ಲದ ಕಾರಣ ಚಾಲಕ ಹಾಗೂ ಕ್ಲೀನರ್‌ಗಳು ಬಿಎಂ ರಸ್ತೆ ವರೆಗೆ ನಡೆದು ಬರಬೇಕು.

ಈ ಸಂಬಂಧ ಶಾಸಕ ಪ್ರೀತಂ ಜೆ. ಗೌಡ ಮಾತನಾಡಿದ್ದು, ಶೀಘ್ರದಲ್ಲೇ ಟ್ರಕ್ ಟರ್ಮಿನಲ್ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net