

ಹಾಸನ: ಆಟೊ ಪ್ರಯಾಣಿಕರ ಅನುಕೂಲಕ್ಕಾಗಿ ಪೊಲೀಸ್ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದ್ದು, ಕ್ಯೂ ಆರ್ ಕೋಡ್ ಮೂಲಕ ಚಾಲಕನ ಜಾತಕವನ್ನೇ ಕೈಯಲ್ಲಿಟ್ಟುಕೊಳ್ಳುವ ವ್ಯವಸ್ಥೆ ಜಾರಿಗೊಳಿಸಿದೆ.
ಆಟೊ ಹತ್ತಿದ ಬಳಿಕ ನಿಗದಿಗಿಂತ ಹೆಚ್ಚು ಬಿಲ್ ಕೇಳುವುದು, ವಿನಾಕಾರಣ ಜಗಳಾಡುವುದು, ರಸ್ತೆ ನಿಯಮ ಉಲ್ಲಂಘಿಸಿ ವಾಹನ ಓಡಿಸುವುದು, ದಾಖಲೆಗಳಿಲ್ಲದೆ ಅಡ್ಡಾದಿಡ್ಡಿ ಓಡಾಟಕ್ಕೆ ಬ್ರೇಕ್ ಬಿದ್ದಿದೆ.
ಪ್ರಾಯೋಗಿಕವಾಗಿ ನಗರದ 100 ಆಟೊಗಳಿಗೆ ಕ್ಯೂ ಆರ್ ಕೋಡ್ ಅಳವಡಿಸಿದ್ದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಗರದ ಎನ್.ಆರ್. ವೃತ್ತದಲ್ಲಿ ಶಾಸಕ ಪ್ರೀತಂ ಜೆ. ಗೌಡ ಆ್ಯಪ್‌ಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಆಟೊ ಏರಿ ಕುಳಿತ ತಕ್ಷಣ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮರಾ ಮೂಲಕ ಅಲ್ಲಿರುವ ಕ್ಯೂ ಆರ್ ಕೋಡ್ ಅನ್ನು ಸ್ಕಾೃನ್ ಮಾಡಿಕೊಂಡರೆ ಚಾಲಕನ ಹೆಸರು, ವಿಳಾಸ, ವಾಹನದ ಸಂಪೂರ್ಣ ಮಾಹಿತಿ ಕಾಣಿಸುತ್ತದೆ. ಎಮರ್ಜೆನ್ಸಿ ಬಟನ್ ಕಾಣಿಸಲಿದ್ದು ಏನಾದರೂ ಸಮಸ್ಯೆಯಾದರೆ ಅದರ ಮೇಲೆ ಒತ್ತಿದರೆ ಕೆಲವೇ ನಿಮಿಷಗಳಲ್ಲಿ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಾರೆ.