

ಹಾಸನ: ಪ್ರಪಂಚದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿಲ್ಲವಾದರೂ ಅದನ್ನು ಕಲುಷಿತಗೊಳಿಸುತ್ತಿರುವುದರಿಂದ ಅಭಾವ ಎದುರಾಗುತ್ತಿದೆ ಎಂದು ವಿಜ್ಞಾನ ಬರಹಗಾರ ಡಾ. ಕೆ.ಎಸ್. ರವಿಕುಮಾರ್ ಹೇಳಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಉಪನ್ಯಾಸಕ ಡಾ. ಬಿ.ಎನ್. ರಮೇಶ್ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಮಾಸಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಾವಿರಾರು ವರ್ಷಗಳ ಹಿಂದೆ ಎಷ್ಟು ನೀರಿತ್ತೊ ಅಷ್ಟೆ ನೀರು ಈಗಲೂ ಇದೆ. ಬಳಕೆಗೆ ದಕ್ಕುವ ಸಿಹಿ ನೀರಿನ ಪ್ರಮಾಣ ಜಗತ್ತಿನ ಒಟ್ಟು ನೀರಿನಲ್ಲಿ ಶೇ.0.007 ರಷ್ಟಿದೆ. ಜನಸಂಖ್ಯೆ ಹೆಚ್ಚಿದಂತೆ ಸಿಹಿ ನೀರಿನ ಲಭ್ಯತೆ ಹೆಚ್ಚುವುದಿಲ್ಲ. ನಾವು ನೀರನ್ನು ಸಂರಕ್ಷಿಸದೆ ಕಲುಷಿತಗೊಳಿಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದರು.
ಪ್ರತಿದಿನ 20 ಲಕ್ಷ ಟನ್ ತ್ಯಾಜ್ಯವನ್ನು ಶುದ್ಧ ನೀರಿಗೆ ಸೇರಿಸಲಾಗುತ್ತಿದೆ. ಒಂದು ಲೀಟರ್ ಕಲ್ಮಶ ಎಂಟು ಲೀ. ನೀರನ್ನು ಕಲುಷಿತಗೊಳಿಸುತ್ತದೆ. ಹೀಗಾಗಿ ಮಿತಬಳಕೆ ಮತ್ತು ಮರುಬಳಕೆಗೆ ಗಮನ ಹರಿಸಬೇಕು. 2050ರ ಹೊತ್ತಿಗೆ ಜಗತ್ತಿನ ಜನಸಂಖ್ಯೆ 9 ಶತಕೋಟಿ ದಾಟಲಿದ್ದು 60 ದೇಶಗಳ 7 ಶತಕೋಟಿ ಜನ ತೀವ್ರ ನೀರಿನ ಕೊರತೆ ಎದುರಿಸಬೇಕಾಗುತ್ತದೆ. ಭಾರತದ ನೀರಿನ ಬೇಡಿಕೆ ಎರಡು ಪಟ್ಟು ಹೆಚ್ಚಲಿದೆ ಎಂದರು.