

ಹಾಸನ: ಮಹಾಕಾಳಿ ವಿಗ್ರಹ ಕಳವಿಗೆ ಪ್ರಯತ್ನ ನಡೆದಿದೆ ಎನ್ನಲು ಹಾರೆ ಅಥವಾ ಬಲವಾದ ಆಯುಧದ ಯಾವುದೇ ಗುರುತು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ತಾಲೂಕಿನ ದೊಡ್ಡಗದ್ದವಳ್ಳಿ ಮಹಾಲಕ್ಷ್ಮಿ ದೇವಾಲಯಕ್ಕೆ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಅವರೊಂದಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರು ಹಾಗೂ ಅರ್ಚಕರಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರೆ ಅಥವಾ ರಾತ್ರಿ ಹೊತ್ತು ವಾಚ್ ಅಂಡ್ ಗಾರ್ಡ್‌ಗಳಿದ್ದರೆ ಅವಘಡಕ್ಕೆ ಸ್ಪಷ್ಟ ಕಾರಣ ತಿಳಿಯುತ್ತಿತ್ತು. ಆದರೂ ಕಳೆದ ಎರಡು ದಿನಗಳಲ್ಲಿ ಊರಿಗೆ ಯಾರಾದರೂ ಅಪರಿಚಿತರು ಬಂದಿದ್ದರೆ ಎಂಬುದನ್ನು ತಿಳಿಯಲು ಟವರ್ ಡಂಪ್ ಮೂಲಕ ಪರಿಶೀಲನೆ ನಡೆಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ ಎಂದರು.
ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವ ಕುರಿತು ಕೇಂದ್ರ ಪುರಾತತ್ವ ಇಲಾಖೆಗೆ ಪತ್ರ ಬರೆಯುತ್ತೇನೆ. ಬೆಂಗಳೂರು ಕಚೇರಿ ಅಧಿಕಾರಿಗಳು ಶುಕ್ರವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೂರಾರು ವರ್ಷಗಳ ಹಳೆಯ ದೇವಸ್ಥಾನ ಆಗಿರುವುದರಿಂದ ಶಿಥಿಲಾವಸ್ಥೆಗೆ ತಲುಪಿ ವಿಗ್ರಹ ಬಿದ್ದಿರಬಹುದು. ಪೂರ್ಣ ತನಿಖೆ ಬಳಿಕ ಸತ್ಯ ಗೊತ್ತಾಗಲಿದೆ. ಹೊಸ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಅರ್ಚಕರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.